ಟಾಲಿವುಡ್ ನಟ ನಾಗ ಶೌರ್ಯ ನಟನೆಯ ರಂಗಬಲಿ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿದ್ದು ಹಿಟ್ ಆಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಕ್ಸಸ್ ಮೀಟ್ ಆಯೋಜಿಸಿತ್ತು. ಆದರೆ ನಟ ನಾಗ ಶೌರ್ಯ ಸಕ್ಸಸ್ ಮೀಟ್ ನಿಂದ ಹಿಂದೆ ಸರಿದಿದ್ದು ರಂಗಬಲಿ ಚಿತ್ರತಂಡದಲ್ಲಿ ಎಲ್ಲವೂ ಸರಿಯಾಗಿಲ್ಲವ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ನಾಗ ಶೌರ್ಯ, ಯುಕ್ತಿ ನಟನೆಯ ‘ರಂಗಬಲಿ’ ಸಿನಿಮಾ ಜುಲೈ 7ರಂದು ರಿಲೀಸ್ ಆಗಿದ್ದು, ಸಿನಿಮಾ ಟೀಸರ್, ಟ್ರೈಲರ್ ಮೂಲಕ ಗಮನ ಸೆಳೆದಿತ್ತು. ಈಗ ಚಿತ್ರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಸಕ್ಸಸ್ ಸಂಭ್ರಮ ಏರ್ಪಡಿಸಿತ್ತು. ಹಾಗೆಯೇ ವಾಹಿನಿಯ ಸಿನಿಮಾ ಪತ್ರಕರ್ತರಿಗೂ ಆಹ್ವಾನ ನೀಡಿತ್ತು. ಸಿನಿಮಾ ವಿಶ್ಲೇಷಕರೊಬ್ಬರು, ಪ್ರಶ್ನೆ ಕೇಳುವ ಸಂದರ್ಭ ಬಂದಾಗ ಸಿನಿಮಾದಲ್ಲಿದ್ದ ಸಮಸ್ಯೆಯೊಂದರ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಕಾರ್ಯಕ್ರಮವನ್ನ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ.
ಕಥೆ ನಡೆಯುವ ಕಾಲವನ್ನು ಸಿನಿಮಾದಲ್ಲಿ ತಪ್ಪಾಗಿ ತೋರಿಸಿರುವ ಬಗ್ಗೆ ಸಿನಿಮಾ ವಿಶ್ಲೇಷಕರು ಪ್ರಶ್ನೆ ಮಾಡಿದರು. ಅವರ ಪ್ರಶ್ನೆಗೆ ಉತ್ತರ ನೀಡಿದ ನಿರ್ದೇಶಕ ಪವನ್ ಬಸಮಸೆಟ್ಟಿ ಸ್ಪಷ್ಟನೆ ನೀಡಿದರು. ಆದರೆ ನಿರ್ದೇಶಕನ ಉತ್ತರದಿಂದ ತೃಪ್ತಿಯಾಗದ ಸಿನಿಮಾ ವಿಶ್ಲೇಷಕ, ಪದೇ ಪದೇ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ತಾಳ್ಮೆ ಕಳೆದುಕೊಂಡು ಮೈಕ್ ತೆಗೆದುಕೊಂಡ ರಂಗಬಲಿ ನಾಯಕ ನಾಗ ಶೌರ್ಯ, ಸಿನಿಮಾದಲ್ಲಿ ಪ್ರತಿ ನಿಮಿಷದ ಮಾಹಿತಿ ನೀಡಬೇಕು ಎಂದರೆ ಪ್ರತಿ ಸಿನಿಮಾವನ್ನು 24 ಗಂಟೆಗಳ ಕಾಲ ಪ್ರದರ್ಶಿಸಬೇಕಾಗುತ್ತದೆ. ‘ಬಾಹುಬಲಿ’ ಚಿತ್ರದಲ್ಲಿ 20-30 ವರ್ಷಗಳಲ್ಲಿ ನಡೆಯುವ ಕಥೆ ಆ ಸಿನಿಮಾದ ಪ್ರತಿ ಡಿಟೈಲ್ಸ್ ನೀಡಲು ಸಾಧ್ಯವೇ? ಹಾಗೆಯೇ ಕೆಲವು ವಿಷಯಗಳನ್ನು ನಂಬಿ ಅಲ್ಲಿಯೇ ಕೈಬಿಡಬೇಕು ಅದನ್ನು ಹೀಗೆ ಎಳೆದಾಡಬಾರದು ಎಂದು ಸಿಟ್ಟಿನಿಂದ ಹೇಳಿ ಹೊರನಡೆದಿದ್ದಾರೆ.
ಸಿನಿಮಾ ವಿಶ್ಲೇಷಕರಿಗೆ ಕ್ಲಾಸ್ ತೆಗೆದುಕೊಂಡ ನಂತರ ಮೈಕ್ ಅನ್ನು ನಿರೂಪಕಿಯ ಕೈಗೆ ಕೊಟ್ಟು ನಾಗ ಶೌರ್ಯಾ ಎದ್ದು ಹೋಗುತ್ತಿದ್ದಂತೆ ಚಿತ್ರದ ನಾಯಕಿ, ಚಿತ್ರತಂಡ ಸಹ ಎದ್ದು ಹೋಗಿದ್ದಾರೆ. ಕಾರ್ಯಕ್ರಮದ ಮಧ್ಯೆ ನಾಗ ಶೌರ್ಯ ಸಿಟ್ಟಾಗಿ ಎದ್ದು ಹೋಗಿದ್ದರ ಬಗ್ಗೆ ಸಿನಿಮಾ ವಿಶ್ಲೇಷಕರು ಅಸಮಾಧಾನ ಹೊರಹಾಕಿದ್ದಾರೆ.