ಮೈಸೂರು ;- ತಾಯಿ ಚಾಮುಂಡೇಶ್ವರಿ ವರ್ಧಂತಿ ಹಿನ್ನೆಲೆ ಮೈಸೂರಿನಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ. ಖುದ್ದು ರಾಜವಂಶಸ್ಥರೇ, ವರ್ಧಂತಿ ಮಹೋತ್ಸವದಲ್ಲಿ ಭಾಗಿಯಾಗ್ತಾ ಇರೋದು ಸಂಭ್ರಮವನ್ನು ಇಮ್ಮಡಿಗೊಳಿಸಲಿದೆ.
ತಾಯಿ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಬೆಳಗ್ಗೆ 10.30 ಗಂಟೆಗೆ ವರ್ಧಂತಿ ಮಹೋತ್ಸವದ ಉತ್ಸವ ಜರುಗಲಿದೆ. ಯದುವಂಶದ ಪ್ರಮೋದ ದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪತ್ನಿ ತ್ರಿಷಿಕಾ ಕುಮಾರಿ, ಪುತ್ರ ಆದ್ಯವೀರ ಸೇರಿ ಲಕ್ಷಾಂತರ ಜನರು ವರ್ಧಂತಿ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ.
ವರ್ಧಂತಿ ಹಿನ್ನಲೆ ಬೆಳಗ್ಗೆ 3:30ರಿಂದಲೇ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿವೆ. ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ ಸೇರಿ ಹಲವು ಸೇವೆಗಳನ್ನು ನೆರವೇರಿಸಲಾಗುತ್ತಿದೆ. ಬೆಳಗ್ಗೆ 9.30ಕ್ಕೆ ಮಹಾಮಂಗಳಾರತಿ ಸೇವೆ ನಡೆಯಲಿದೆ. ಈ ಕಾರಣಕ್ಕೆ ಬೆಳಗ್ಗೆ 8 ಗಂಟೆಯವರೆಗೂ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಲ್ಲ. ಭಕ್ತರಿಗೆ ಬೆಳಗ್ಗೆ 8 ಗಂಟೆಯ ನಂತರ ದರ್ಶನಕ್ಕೆ ಅವಕಾಶ ನೀಡಿ ಮೈಸೂರಿನ ಚಾಮುಂಡೇಶ್ವರಿ ದೇವಾಲಯದ ಇಒ ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.