ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಯಶಸ್ಸು ಗಳಿಸಿದ ಮೇಲೆ ಜಗತ್ತಿನಾದ್ಯಂತ ಹಲವು ಟಿ20 ಲೀಗ್ ಟೂರ್ನಿಗಳು ಜನ್ಮತಾಳಿವೆ. ಐಪಿಎಲ್ ಟೂರ್ನಿಯನ್ನೇ ಕಾಫಿ ಮಾಡಿರುವ ಉಳಿದ ಟಿ20 ಲೀಗ್ಗಳು ಮರ್ಕ್ಯೂ ಆಟಗಾರರನ್ನಾಗಿ ವಿದೇಶಿ ಆಟಗಾರನ್ನು ಆಯ್ದುಕೊಳ್ಳಲು ಅವಕಾಶ ನೀಡಿವೆ. ಆದರೆ ವಿದೇಶಿ ಟಿ20 ಟೂರ್ನಿಗಳಲ್ಲಿ ಭಾರತದ ಯಾವೊಬ್ಬ ಹಾಲಿ ಕ್ರಿಕೆಟಿಗನು ಪಾಲ್ಗೊಳ್ಳಲುವ ಅವಕಾಶವನ್ನು ಬಿಸಿಸಿಐ ನೀಡಿಲ್ಲ.
ಟೀಂ ಇಂಡಿಯಾ ಹಾಲಿ ಕ್ರಿಕೆಟಿಗರು ವಿದೇಶಿ ಟಿ20 ಲೀಗ್ನಲ್ಲಿ ಪಾಲ್ಗೊಳ್ಳುವುದಕ್ಕೆ ನಿಷೇಧ ಹೇರಿದ್ದು, ಕಠಿಣ ನಿಯಮಾವಳಿಗಳನ್ನು ತಂದಿದೆ. ಹೀಗಿದ್ದೂ ಇತ್ತೀಚೆಗಿನ ದಿನಗಳಲ್ಲಿ ಕೆಲವು ಕ್ರಿಕೆಟಿಗರು ಭಾರತ ಹಾಗೂ ಅಂತಾರಾಷ್ಟ್ರೀಯ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿ, ವಿದೇಶಿ ಟಿ20 ಲೀಗ್ನಲ್ಲಿ ಪಾಲ್ಗೊಳ್ಳಲಾರಂಭಿಸಿದ್ದಾರೆ. ಆದರೆ ಈ ರೀತಿ ಮಾಡುವುದಕ್ಕೂ ಬ್ರೇಕ್ ಹಾಕಲು ಬಿಸಿಸಿಐ ಮುಂದಾಗಿರುವಂತೆ ಕಂಡುಬಂದಿದ್ದು, ಈ ಕುರಿತಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗುಟ್ಟೊಂದನ್ನು ಬಿಚ್ಚಿಟ್ಟಿದ್ದಾರೆ.
ಮುಂಬೈನಲ್ಲಿ ಶುಕ್ರವಾರ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಮೀಟಿಂಗ್ನಲ್ಲಿ ಹಲವು ವಿಚಾರಗಳನ್ನು ಚರ್ಚಿಸಲಾಯಿತು. ಈ ಕುರಿತಂತೆ ಉದ್ದೇಶಪೂರ್ವಕವಾಗಿ ನಿವೃತ್ತಿ ತೆಗೆದುಕೊಂಡು, ವಿದೇಶಿ ಲೀಗ್ನಲ್ಲಿ ಪಾಲ್ಗೊಳ್ಳಲಿಚ್ಚಿಸುವ ಆಟಗಾರರಿಗೆ ಬ್ರೇಕ್ ಹಾಕುವ ಸುಳಿವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬಿಚ್ಚಿಟ್ಟಿದ್ದಾರೆ. ವಿದೇಶಿ ಟಿ20 ಲೀಗ್ನಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದಲೇ ಕೆಲವು ಕ್ರಿಕೆಟಿಗರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳುತ್ತಿರುವುದು ಬಿಸಿಸಿಐ ಅಪೆಕ್ಸ್ ಬಾಡಿಯ ಅಸಮಾಧಾನಕ್ಕೆ ಗುರಿಯಾಗಿದೆ.
“ಉದ್ದೇಶಪೂರ್ವಕವಾಗಿಯೇ ಅವಧಿಗೂ ಮುನ್ನ ನಿವೃತ್ತಿ ನಿರ್ಧಾರ ಪ್ರಕಟಿಸುತ್ತಿರುವ ಚಾಳಿಗೆ ಕಡಿವಾಣ ಹಾಕಲು ನಾವು ಸದ್ಯದಲ್ಲಿಯೇ ಒಂದು ಪಾಲಿಸಿಯನ್ನು ಜಾರಿಗೆ ತರಲಿದ್ದೇವೆ. ಒಂದು ತಿಂಗಳು ಅಥವಾ ಸ್ವಲ್ಪ ದಿನಗಳ ಬಳಿಕ ಪಾಲಿಸಿ ನೀತಿ–ನಿಯಮಗಳು ತೀರ್ಮಾನವಾದ ಬಳಿಕ ಅದನ್ನು ಒಪ್ಪಿಗೆಗಾಗಿ ಅಪೆಕ್ಸ್ ಕೌನ್ಸಿಲ್ಗೆ ಕಳಿಸಿಕೊಡಲಾಗುವುದು” ಎಂದು ಜಯ್ ಶಾ ತಿಳಿಸಿದ್ದಾರೆ.