ಬೆಂಗಳೂರು ;- ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಖಂಡಿಸಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಬೆಂಗಳೂರಿನ ಹೈಕೋರ್ಟ್ ರದ್ದುಪಡಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಮಧ್ಯಂತರ ಆದೇಶ ಮಾಡಿ ವಿಚಾರಣೆ ಮುಂದೂಡಿದೆ.
ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ನಗರದ ಸ್ವಾತಂತ್ರ್ಯ ಉದ್ಯಾನ ಹೊರತುಪಡಿಸಿ ಇತರ ಭಾಗದಲ್ಲಿ ಪ್ರತಿಭಟನೆ ನಡೆಸಬಾರದು ಎಂಬುದಾಗಿ ರಾಜ್ಯಸರ್ಕಾರದ ಆದೇಶ ಹೊರಡಿಸಿದೆ. ಈ ಆದೇಶ ಉಲ್ಲಂಘಿಸಿ ಮತ್ತು ಪೂರ್ವಾನುಮತಿ ಪಡೆಯದೇ ನಗರದ ಪುರಭವನದ ಮುಂದೆ ಪ್ರತಿಭಟನೆ ನಡೆಸಿ, ಸಾರ್ವಜನಿಕ ಶಾಂತಿ ಭಂಗ ಮಾಡಿ ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಎಸ್.ಪಾರ್ಕ್ ಠಾಣೆಯ ಇನ್ಸ್ಪೆಕ್ಟರ್ 6ನೇ ಎಸಿಎಂಎಂ ನ್ಯಾಯಾಲಯಕ್ಕೆ ಖಾಸಗಿ ಸಲ್ಲಿಸಿದ್ದಾರೆ.
ಆದರೆ, ಕಾನೂನು ಪ್ರಕಾರ ಆದೇಶ ಹೊರಡಿಸಿದ ಅಧಿಕಾರಿ ಅಥವಾ ಅವರಿಗಿಂತ ಮೇಲಿನ ಶ್ರೇಣಿಯ ಅಧಿಕಾರಿ ದೂರು ದಾಖಲಿಸಬೇಕಿದೆ. ಈ ಪ್ರಕರಣದಲ್ಲಿ ಎಸ್.ಜೆ.ಪಾರ್ಕ್ ಠಾಣೆ ಇನ್ಸ್ಪೆಕ್ಟರ್ ಖಾಸಗಿ ದೂರು ದಾಖಲಿಸಿರುವುದು ಮತ್ತು ಆ ದೂರು ಪರಿಗಣಿಸಿ ಅರ್ಜಿದಾರರಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿರುವುದು ಕಾನೂನು ಬಾಹಿರ. ಹೀಗಾಗಿ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿದರು. ಅರುಣ್ ಶ್ಯಾಮ್ ಅವರ ವಾದವನ್ನು ಪರಿಗಣಿಸಿದ್ದ ನ್ಯಾಯಪೀಠ, ಚಕ್ರವರ್ತಿ ಸೂಲಿಬೆಲೆ ವಿರುದ್ಧದ ಸಮನ್ಸ್ಗೆ ತಡೆಯಾಜ್ಞೆ ನೀಡಿದೆ.