ಬೆಂಗಳೂರು ;- ರಾಜ್ಯ ಕಾಂಗ್ರೆಸ್ ಸರ್ಕಾರ ಒಂದೇ ತಿಂಗಳಲ್ಲಿ ಅಪಖ್ಯಾತಿಗೆ ಒಳಗಾಗಿದೆ ಎಂದು ಬಸವರಾಜ್ ಬೊಮ್ಮಾಯಿ ಅವರು ಟೀಕೆ ಮಾಡಿದ್ದಾರೆ.
ಈ ಸಂಬಂಧ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ನುಡಿದಂತೆ ನಡೆಯದ ಸರ್ಕಾರ ಕವಲು ದಾರಿಯಲ್ಲಿದ್ದು, ಒಂದೇ ತಿಂಗಳಲ್ಲಿ ಅಪಖ್ಯಾತಿಗೆ ಒಳಗಾದ ಸರ್ಕಾರ ಇದಾಗಿದೆ.
ಪಂಚ ಗ್ಯಾರಂಟಿ ಜಾರಿಗೊಳಿಸುವಲ್ಲಿ ಗೊಂದಲ ಇದೆ. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಅಂತ ಆರೋಪ ಮಾಡಿದ್ದೀರಿ, ಎಫ್ಸಿಐ ಅಧಿಕಾರಿಗೆ ಒಂದು ರಾಜ್ಯಕ್ಕೆ ಅಕ್ಕಿ ಕೊಡುವ ಅಧಿಕಾರ ಇಲ್ಲ. ನೀವು ಕೇಂದ್ರ ಸರ್ಕಾರದ ಜೊತೆ ಮಾತಾಡಬೇಕಿತ್ತು. ಅಷ್ಟಕ್ಕೂ ಕೇಂದ್ರ ಸರ್ಕಾರ ನಿಮ್ಮ ಅನ್ನ ಭಾಗ್ಯಕ್ಕೆ ಅಕ್ಕಿ ಕೊಡ್ತೀವಿ ಅಂತ ಹೇಳಿತ್ತಾ? ಕೇಂದ್ರದ ಜೊತೆಗೆ ಇದರ ಬಗ್ಗೆ ಚರ್ಚೆ ಮಾಡಿದ್ದೀರಾ” ಎಂದು ಪ್ರಶ್ನಿಸಿದರು.
ಮಾನ್ಸೂನ್ ಕಾರಣದಿಂದ ಅಕ್ಕಿ ಅಲಭ್ಯತೆ ಇದೆ. ಹಾಗಾಗಿ ಕೇಂದ್ರ ಅಕ್ಕಿ ಕೊಡಕ್ಕಾಗಿಲ್ಲ. ಪಂಜಾಬ್ ಸರ್ಕಾರ ಅಕ್ಕಿ ಕೊಡಲು ತಯಾರಾಗಿದ್ದರು. ಆಂಧ್ರಪ್ರದೇಶ, ಛತ್ತೀಸ್ಗಡ ಸರ್ಕಾರಗಳು ಸಹಾಯ ಮಾಡಲು ಮುಂದಾಗಿದ್ದವು. ತೆಲಂಗಾಣ ಸರ್ಕಾರ ಭತ್ತ ಕೊಡಲು ಸಿದ್ದರಿದ್ದರು. ನಿಮಗೆ ಜನರಿಗೆ ಅಕ್ಕಿ ಕೊಡುವ ಇಚ್ಛಾಶಕ್ತಿ ಇಲ್ಲ. ಈಗ ದುಡ್ಡು ಕೊಡಲು ಮುಂದಾಗಿದ್ದೀರಾ, ಜನರು ಹಣ ತಿಂತಾರಾ ಅಂತ ಸಿಎಂ ಕೇಳಿದ್ದಾರೆ. ಸರ್ಕಾರ 5 ಕೆಜಿ ಅಕ್ಕಿ ಬದಲು 170 ರೂ. ನೀಡುವುದು ಒಬ್ಬ ಬಡ ಮಹಿಳೆಯ ಅರ್ಧ ದಿನದ ಕೂಲಿಗೆ ಸಮವಾಗಿದೆ” ಎಂದು ಹೇಳಿದರು.