ಹಿರಿಯೂರು: ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದ್ದು, ನಂಬಿ ಬಂದವರ ಎಂದಿಗೂ ಕೈ ಬಿಟ್ಟಿಲ್ಲ. ಪೋಷಿಸಿ ಸಲಹಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ನಗರದ ತುಳಸಿ ನಾರಾಯಣರಾವ್ ಕಲ್ಯಾಣ ಮಂಟಪದಲ್ಲಿ ಡಿ. ಸುಧಾಕರ್ ಮತ್ತು ಜಿ.ಎಸ್ ಮಂಜುನಾಥ್ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಸನ್ಮಾನ ಮತ್ತು ಜಿ.ಎಸ್ ಮಂಜುನಾಥ್ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಳ್ಮೆಯಿಂದ ಕಾದಲ್ಲಿ ಅವಕಾಶಗಳ ಹೆಬ್ಬಾಗಿಲುಗಳು ತಂತಾನೆ ತೆರೆಯುತ್ತವೆ ಎಂದರು.
ಜಿ.ಎಸ್. ಮಂಜುನಾಥ್ ಈ ಮೊದಲು ಹಿರಿಯೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತರೂ ಜನರ ಒಡನಾಟ ಎಂದೂ ಬಿಡಲಿಲ್ಲ. ಎಲ್ಲಾ ಜನಾಂಗದ ಜನರ ಮತ್ತು ಯುವಕರ ಒಲವು ಮತ್ತು ವಿಶ್ವಾಸ ಗಳಿಸಿಕೊಂಡು ಸದಾ ಜನರೊಡನೆ ಬೆರೆಯುವ ಗುಣವುಳ್ಳವ ರಾಗಿದ್ದಾರೆ. ಭವಿಷ್ಯದಲ್ಲಿ ಜಿ.ಎಸ್. ಮಂಜುನಾಥ್ರವರಿಗೆ ನಿಜಕ್ಕೂ ಒಳ್ಳೆಯ ದಿನಗಳು ಕಾದು ಕುಳಿತಿವೆ ಎಂದರು.
ಜಿ.ಎಸ್ ಮೂಲತಃ ಹೋರಾಟದ ಮನೋಭಾವದ ವ್ಯಕ್ತಿ. ಅನೇಕ ಜನಪರ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪೌರ ನೌಕರರ ಪರವಾಗಿ ಹೋರಾಟ ಮಾಡಿ ಅವರಿಗೆ ಖಜಾನೆಯಿಂದಲೇ ವೇತನ ಪಾವತಿಯಾಗುವಂತೆ ಮಾಡಿದ್ದರು. ಅಂದು ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ, ಜಿ.ಎಸ್. ಮಂಜುನಾಥ್ ನಡೆಸಿದ ಹೋರಟಕ್ಕೆ ಸ್ಪಂದಿಸಿ ಖಜಾನೆಯಿಂದಲೇ ವೇತನ ಪಾವತಿಗೆ ಆದೇಶ ಮಾಡಿದ್ದರು. ಮಂಜುನಾಥ್ ಅವರ ಕನಸುಗಳೇನು ಇವೆಯೋ ಅವೆಲ್ಲಾ ಬರುವ ದಿನಗಳಲ್ಲಿ ಸಾಕಾರಗೊಳ್ಳಲಿ. ನಾವೆಲ್ಲಾ ಅವರ ಜೊತೆ ಇದ್ದು ಶಕ್ತಿ ತುಂಬೋಣ ಎಂದು ಆಶಿಸಿದರು.