ಲಕ್ನೋ: ಪತ್ನಿಯೊಬ್ಬಳು ತನ್ನ ಮೈದುನ ಜೊತೆ ಸೇರಿ ಪತಿಯನ್ನೇ ಗುಂಡಿಕ್ಕಿ ಕೊಂದ ಘಟನೆ ಉತ್ತರಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದಿದೆ. ದಿನೇಶ್ ಯಾದವ್(30) ಕೊಲೆಯಾದ ವ್ಯಕ್ತಿ. ಸ್ಯೋಯದ್ ಗ್ರಾಮದಲ್ಲಿ ಸುಮಾರು 3.45ಕ್ಕೆ ದಿನೇಶ್ ಹೊಲದಲ್ಲಿ ಕೆಲಸ ಮಾಡುತ್ತಿದ್ದನು. ಆಗ ಆತನನ್ನು ಹಿಂದಿನಿಂದ ಗುಂಡಿಕ್ಕಿ ಕೊಲೆ ಮಾಡಿದ್ದರು. ಗುಂಡೇಟಿಗೆ ದಿನೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದಿನೇಶ್ ತಂದೆ ಈ ಕೊಲೆಗೆ ಸಂಬಂಧಪಟ್ಟಂತೆ ಇಬ್ಬರು ಅಪರಿಚಿತರ ಮೇಲೆ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಕಮಾಸಿನ್ ಠಾಣೆ ಪೊಲೀಸರು ವಿಚಾರಣೆ ಶುರು ಮಾಡಿದ್ದರು. ಈ ಕೇಸ್ ವಿಚಾರಣೆ ಶುರು ಮಾಡಿದ ದಿನದಿಂದ ದಿನೇಶ್ ಪತ್ನಿ ಬಿಜಮಾ ದೇವಿ ಮೇಲೆ ಅನುಮಾನ ಮೂಡಿದೆ.
ಬಿಜಮಾ ಹಾಗೂ ಆಕೆಯ ಮೈದುನ ಅಕಿಲೇಶ್ ಯಾದವ್ ನನ್ನು ವಿಚಾರಣೆ ಮಾಡಿದ್ದಾಗ ಸತ್ಯಾಂಶ ಹೊರಬಂದಿದೆ ಎಂದು ಬಬೇರೂ ಕ್ಷೇತ್ರದ ಹಿರಿಯ ಪೊಲೀಸ್ ಅಧಿಕಾರಿ ಓಂಪ್ರಕಾಶ್ ಹಾಗೂ ಕಮಾಸಿನ್ ಹಿರಿಯ ಅಧಿಕಾರಿ ರಾಕೇಶ್ ಪಾಂಡೆ ತಿಳಿಸಿದ್ದಾರೆ. ಬಿಜಮಾ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ದಿನೇಶ್ ನನ್ನ ಮೇಲೆ ಯಾವಾಗಲೂ ಅನುಮಾನಪಡುತ್ತಿದ್ದ. ಅಷ್ಟೇ ಅಲ್ಲದೇ ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದ. ನನಗೆ ಆತನ ತಾತ, ಚಿಕ್ಕಪ್ಪ ಹಾಗೂ ಗ್ರಾಮದ ಹಿರಿಯರ ಜೊತೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸುತ್ತಿದ್ದ. ಇದ್ದರಿಂದ ನಾನು ಬೇಸತ್ತು ಆತನ ಕೊಲೆ ಮಾಡಲು ನಿರ್ಧರಿಸಿದೆ ಎಂದು ಬಿಜಮಾ ಪೊಲೀಸರ ಹತ್ತಿರ ತಿಳಿಸಿದ್ದಾಳೆ.
ದಿನೇಶ್ ಹಾಗೂ ಬಿಜಮಾ ಮದುವೆಯಾಗಿ ಮೂರು ವರ್ಷವಾಗಿತ್ತು. ಅಖಿಲೇಶ್ ತನ್ನ ಅಣ್ಣನನ್ನು ಕೊಂದು ಆತ ಜೈಲಿಗೆ ಹೋಗಿ ಬಂದ ನಂತರ ಆತನನ್ನು ಮದುವೆಯಾಗುವುದ್ದಾಗಿ ಬಿಜಮಾ ಅಖಿಲೇಶ್ಗೆ ತಿಳಿಸಿದ್ದಳು. ಅಖಿಲೇಶ್ ಪುಣೆಯಲ್ಲಿ ಕೆಲಸ ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ತನ್ನ ಮನೆಗೆ ಬಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.