ಬೆಂಗಳೂರು: ಕಳೆದ ಮೂರು ದಿನಗಳಿಂದ ನಟ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವಿನ ವಾಕ್ ಸಮರ ಮುಂದುವರೆದಿದೆ. ಇಬ್ಬರು ಆರೋಪ, ಪ್ರತ್ಯಾರೋಪ ಮಾಡಿದ್ದು ಇದೀಗ ಸುದೀಪ್ ಕಾನೂನಿನ ಮೂಲಕ ಉತ್ತರಿಸಲು ಮುಂದಾಗಿದ್ದಾರೆ. ಈ ಮಧ್ಯೆ ನಟ ಸುದೀಪ್ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ.
ಹುಚ್ಚ ಸಿನಿಮಾ ಸಮಯದಲ್ಲಿ ನೀಡಿದ ಮುಂಗಡ ಹಣವನ್ನು ಸುದೀಪ್ ವಾಪಸ್ ಕೊಟ್ಟಿಲ್ಲ ಎಂದು ನಿರ್ಮಾಪಕ ರೆಹಮಾನ್ ಆರೋಪಿಸಿದ್ದಾರೆ. ಹುಚ್ಚ ಸಿನಿಮಾ ಮಾಡಿದ್ದು ನಾನು. ಆ ಸಿನಿಮಾದಿಂದಲೇ ಕಿಚ್ಚ ಅನ್ನೋ ಬಿರುದು ಬಂದಿದ್ದು. ಹಾಗಂತ ನಾನು ಅವರ ವಿರುದ್ಧ ಮಾನನಷ್ಟ ಮೊಕದ್ದೊಮ್ಮೆ ಹಾಕಲು ಸಾಧ್ಯವೇ ಎಂದು ಹೇಳುವ ಮೂಲಕ ಸುದೀಪ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ನಿರ್ಮಾಪಕ ಎಂ.ಎನ್ ಕುಮಾರ್, ನಟ ಸುದೀಪ್ ವಿರುದ್ಧ ಬರೋಬ್ಬರಿ 10 ಕೋಟಿ ರೂಪಾಯಿ ವಂಚನೆ ಆರೋಪ ಮಾಡಿದ್ದರು. ಸಿನಿಮಾ ಮಾಡುವುದಾಗಿ ಹೇಳಿ, ಹಣ ಪಡೆದು ತಮ್ಮ ಆಪ್ತರಿಗೆ ಕೊಡಿಸಿದ್ದಾರೆ. ಈಗ ಸಿನಿಮಾ ಮಾಡಿಕೊಡಿ ಅಂತಾ ಕೇಳಿದ್ರೆ, ಪ್ರತಿಕ್ರಿಯೆ ನೀಡಿಲ್ಲ ಅಂತಾ ಕಳೆದ ವಾರ ಆರೋಪವನ್ನು ಮಾಡಿದ್ದರು. ತಮ್ಮ ಮೇಲೆ ಸರಣಿ ಆರೋಪಗಳೂ ಕೇಳಿಬಂದ ಬೆನ್ನಲ್ಲೇ ಕಿಚ್ಚ ಸುದೀಪ್ ಅವರು ಕುಮಾರ್ ವಿರುದ್ಧ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದೊಮ್ಮೆ ಹೂಡಿದ್ದಾರೆ.
ಕಿಚ್ಚ ಸುದೀಪ್ ಕೂಡ ಮಾಧ್ಯಮಗಳಿಗೆ ಒಂದಿಷ್ಟು ವಿಷಯಗಳನ್ನು ತಲುಪಿಸಿದ್ದು, ತಮ್ಮ ಆಪ್ತ ಹಾಗೂ ನಿರ್ಮಾಪಕ ಜಾಕ್ ಮಂಜು ಮತ್ತು ಸುದೀಪ್ ಮ್ಯಾನೇಜರ್ ಚಕ್ರವರ್ತಿ ಚಂದ್ರಾಚೂಡ್ ದಾಖಲೆಗಳ ಸಮೇತ ಮಾಧ್ಯಮಗಳ ಮುಂದೆ ಬಂದು ಕುಮಾರ್ ಮಾಡಿದ್ದ ಆರೋಪಗಳಿಗೆ ಹುರುಳಿಲ್ಲ ಎಂದಿದ್ದರು.
ಇದೇ ವಿಚಾರವಾಗಿ ಸುದೀಪ್ ಒಂದು ಮೆಸೇಜ್ ಕಳಿಸಿದ್ದಾರೆ. ನಾನು ಬೆಳೆದಿದ್ದೇ ಸಿನಿಮಾ ನಿರ್ಮಾಪಕರಿಂದ. 27 ವರ್ಷಗಳ ನನ್ನ ಸಿನಿಮಾ ಕೆರಿಯರ್ನಲ್ಲಿ ಒಳಿತನ್ನೇ ಮಾಡಿದ್ದೇನೆ ನನ್ನ ವಿರುದ್ಧ ಮಾಡಿದ ಆರೋಪಗಳಿಗೆ ನಾನು ಕಾನೂನು ಮೂಲಕವೇ ಉತ್ತರ ಕೊಡುತ್ತೇನೆ. ನನಗೆ ಸಿನಿಮಾ ಕ್ಷೇತ್ರದ ಎಲ್ಲಾ ಅಂಗ ಸಂಸ್ಥೆಗಳ ಮೇಲೆ ನಂಬಿಕೆಯಿದೆ ಎಂದಿದ್ದರು.
ಸದ್ಯ ಕಿಚ್ಚ ಸುದೀಪ್ ಅವರು ನಿರ್ಮಾಪಕ ಎಂ.ಎನ್. ಕುಮಾರ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಅತ್ತ ಕುಮಾರ್ ತಮ್ಮ ಮುಂದಿನ ನಿರ್ಧಾರದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಮಧ್ಯೆ ಸುದೀಪ್ ವಿರುದ್ಧ ರೆಹೆಮಾನ್ ಆರೋಪ ಮಾಡಿದ್ದು ಈ ವಾಕ್ ಸಮರ ಎಲ್ಲಿಗೆ ಹೋಗಿ ಮುಟ್ಟುತ್ತದೋ ಕಾದು ನೋಡಬೇಕಿದೆ.