ಮಂಡ್ಯ : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಕ್ಕಲಿಗ ನಾಯಕರು ಬೆಳೆಯುವುದನ್ನು ಸಹಿಸಲ್ಲ. ಒಕ್ಕಲಿಗರನ್ನು ಅವರು ದೂರ ಇಡುತ್ತಾ ಬಂದಿದ್ದಾರೆ. ಮತ್ತೆ ನಾನು ಎಂದೂ ಗೆಲ್ಲಲ್ಲ ಎಂದು ಅಂದುಕೊಂಡಿದ್ದರು. ಮಂಡ್ಯದ ಜನ ನನ್ನನ್ನು ಪಾಪದ ಹುಡುಗ ಎಂದು ಗೆಲ್ಲಿಸಿಬಿಟ್ಟಿದ್ದಾರೆ. ನಾನು ಈಗ ಮಂತ್ರಿ ಆಗಿದ್ದೇನೆ. ಅದನ್ನು ಸಹಿಸಿಕೊಳ್ಳಲು ಕುಮಾರಸ್ವಾಮಿಗೆ ಕಷ್ಟಆಗುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮಗೇನೂ ಅವರ ಮೇಲೆ ದ್ವೇಷ ಇಲ್ಲ. ಆದರೆ, ಅವರಿಗೆ ನಮ್ಮನ್ನು ಕಂಡರೆ ಆಗುವುದಿಲ್ಲ.
ಇದನ್ನು ಹಳೇ ಮೈಸೂರು ಭಾಗದ ಜನತೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ನಾನು ಒಕ್ಕಲಿಗ ನಾಯಕ ಎಂಬ ಕಾರಣಕ್ಕೆ ನನ್ನ ಮೇಲೆ ದ್ವೇಷ ಕಾರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿಯಾಗಿದ್ದವರು. ನಾವೆಲ್ಲಾ ಅವರನ್ನು ಪ್ರೀತಿ ಮಾಡುತ್ತೇವೆ. ಕುಮಾರಸ್ವಾಮಿ ದೇವೇಗೌಡರ ಹೆಸರನ್ನು ತರದೆ ರಾಜಕೀಯ ಮಾಡುವುದಕ್ಕೆ ಆಗುವುದಿಲ್ಲ. ಅದಕ್ಕಾಗಿ ನಿತ್ಯ ದೇವೇಗೌಡರ ಹೆಸರೆತ್ತುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸದನದಲ್ಲಿ ನಾವು ದೇವೇಗೌಡರ ಹೆಸರು ಬಳಸಿಲ್ಲ. ದೇವೇಗೌಡರ ಹೆಸರು ಬಳಸುವವರೇ ಅವರು. ಗೌಡರ ಹೆಸರು ಹೇಳದಿದ್ದರೆ ತಮ್ಮ ಬೇಳೆಕಾಳು ಬೇಯಲ್ಲ ಅನ್ನುವುದು ಅವರಿಗೂ ಗೊತ್ತಿದೆ.
ಆದ್ದರಿಂದಲೇ ನಿತ್ಯ ದೇವೇಗೌಡರ ಹೆಸರೆತ್ತಿಯೇ ಮಾತು ಆರಂಭಿಸುತ್ತಾರೆ ಎಂದು ತಿರುಗೇಟು ನೀಡಿದರು. ಪೆನ್ಡ್ರೈವ್ ದಾಖಲೆ ನೀಡಲಿ: ವರ್ಗಾವಣೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುಮ್ಮನೆ ಆರೋಪ ಮಾಡಿದರೆ ಸಾಲದು. ಸರ್ಕಾರದ ವಿರುದ್ಧ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಸರ್ಕಾರದ ವಿರುದ್ಧ ಅವರ ಬಳಿ ಯಾವುದೇ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಸಂತೋಷ. ಬೇಕಿದ್ದರೆ ಸದನದಲ್ಲೇ ದಾಖಲೆಗಳನ್ನು ಬಿಡುಗಡೆ ಮಾಡಲಿ. ಅದನ್ನು ಬಿಟ್ಟು ಸುಮ್ಮನೆ ದಾಖಲೆ ಇದೆ ಎಂದು ಹೇಳಿ ಈ ಹಿಂದೆ ಜನಾರ್ದನರೆಡ್ಡಿ ಸಿಡಿಸಿದ ಸಿಡಿ ಬಾಂಬ್ ರೀತಿ ಆಗುವುದು ಬೇಡ ಎಂದು ಟೀಕಿಸಿದರು.