ಲಕ್ನೋ: ಬೆಲೆಬಾಳುವ ವಸ್ತುಗಳು ಕಳ್ಳತನವಾದಾಗ ಪೊಲೀಸರಿಗೆ ದೂರು ಕೊಟ್ಟಿದ್ದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಚಪ್ಪಲಿ ಕಳ್ಳತನವಾಗಿದೆ (Slipper Theft) ಎಂದು ಪೊಲೀಸರ ಮೊರೆ ಹೋಗಿ ಇದೀಗ ಎಫ್ಐಆರ್ ದಾಖಲಾದ ಪ್ರಸಂಗವೊಂದು ಉತ್ತರಪ್ರದೇಶದಲ್ಲಿ (Uttarpradesh) ನಡೆದಿದೆ. ಹೌದು. ವಿಚಿತ್ರವಾದರೂ ಸತ್ಯವಾದ ಈ ಘಟನೆ ನಡೆದಿದ್ದು ಕಾನ್ಪುರ ನಗರದಲ್ಲಿರುವ ಸಿವಿಲ್ ಲೈನ್ ನ ಭೈರವ ಬಾಬಾ ದೇವಸ್ಥಾನದಲ್ಲಿ.
ದಬೌಲಿ ನಿವಾಸಿ ಕಾಂತಿಲಾಲ್ ನಿಗಮ್ ಭಾನುವಾರ ಬೆಳಗ್ಗೆ ದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ಹೋಗಿದ್ದಾರೆ. ಚಪ್ಪಲಿಯನ್ನು ದೇವಸ್ಥಾನದ ಹೊರಗೆ ಬಿಟ್ಟು, ಹತ್ತಿರದಲ್ಲೇ ಇದ್ದ ಅಂಗಡಿಯೊಂದರಿಂದ ಪೂಜಾ ಸಾಮಗ್ರಿ ತೆಗೆದುಕೊಂಡು ಹೋಗಿದ್ದಾರೆ. ಅಂತೆಯೇ ದೇವರ ದರ್ಶನ ಪಡೆದು, ಪೂಜೆ ಮುಗಿಸಿಕೊಂಡು ವಾಪಸ್ ಅಂಗಡಿಗೆ ಬಂದಾಗ ಚಪ್ಪಲಿ ಕಾಣದಾಗಿದೆ.
ತಾನು ಇಟ್ಟ ಸ್ಥಳದಲ್ಲಿ ಎಷ್ಟು ಹುಡುಕಾಡಿದರೂ ಚಪ್ಪಲಿ ಕಾಣಿಸಲಿಲ್ಲ. ಹೀಗಾಗಿ ಕಾಂತಿಲಾಲ್ ಪೊಲೀಸರ ಮೊರೆ ಹೋಗಿದ್ದಾರೆ. ನನ್ನ ಚಪ್ಪಲಿ ಕಾಣೆಯಾಗಿದೆ ಎಂದು ಇ-ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಕೂಡ ದೂರು ಸ್ವೀಕರಿಸಿ ಎಫ್ಆರ್ ದಾಖಲಿಸಿಕೊಂಡಿದ್ದಾರೆ.
ಕಾಂತಿಲಾಲ್ ದೂರಿನಲ್ಲೇನಿತ್ತು..?: ದೇಗುಲದ ಹೊರಗೆ ಇಟ್ಟಿದ್ದ ನನ್ನ ಚಪ್ಪಲಿಯನ್ನು ಯಾರೋ ಕದ್ದೊಯ್ದಿದ್ದಾರೆ. ನೀಲಿ ಬಣ್ಣದ 7 ಸೈಜ್ ಚಪ್ಪಲಿಯಾಗಿದೆ. ಈ ಚಪ್ಪಲಿಯಲ್ಲಿ ಅಕ್ಯುಪ್ರೆಶರ್ ಇದ್ದು, ಆದಷ್ಟು ಬೇಗ ಹುಡುಕಿಕೊಡಿ ಹಾಗೂ ಕದ್ದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂತಿಲಾಲ್ ಮನವಿ ಮಾಡಿದ್ದಾರೆ.