ಬೆಂಗಳೂರು: ಪೆನ್ಡ್ರೈವ್ ಖಾಲಿ ಇಲ್ಲ, ಈ ಪೆನ್ಡ್ರೈವ್ ಬೇರೆಯದ್ದು ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ದಾಖಲೆ ಕೊಡಿ ಅಂದರೆ ದುಡ್ಡು ಕೊಡಲು ಸಾಧ್ಯವಾ? ಈ ಪೆನ್ಡ್ರೈವ್ ಆಪರೇಷನ್ ಮಾಡಿದ ಸಿಡಿ ರೀತಿ ಅಲ್ಲ.
ಅದು ಸಾಮಾನ್ಯ ಪೆನ್ಡ್ರೈವ್ ಅಲ್ಲ. ಈ ಪೆನ್ಡ್ರೈವ್ ರಿಲೀಸ್ಗೆ ನನಗೆ ಆತುರ ಇಲ್ಲ. ಪೆನ್ಡ್ರೈವ್ ಬಿಡುಗಡೆಯನ್ನು ಕಾಂಗ್ರೆಸ್ನವರೇ ತಡೆಯುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಪೆನ್ಡ್ರೈವ್ ಬಿಡುಗಡೆಗೆ ಕಾಂಗ್ರೆಸ್ನವರಿಗೆ ಯಾಕೆ ಇಷ್ಟು ಆತುರ? ಇವರ ಸಮಸ್ಯೆ ಬಗ್ಗೆ ಎಲ್ಲವನ್ನೂ ಬಿಚ್ಚಿಟ್ಟಿದ್ದೇನೆ, ಸಲಹೆ ನೀಡಿದ್ದೇನೆ. ಸರಿಪಡಿಸಿಕೊಳ್ಳುವುದಾದರೆ ಸರಿಪಡಿಸಿಕೊಳ್ಳಲಿ ಎಂದರು. ಕಾಂಗ್ರೆಸ್ಸಿಗರು ಇನ್ನೂ ಕೆಲ ವಿಕೆಟ್ ಬೀಳಲಿ ಅಂತಾ ಹೇಳುತ್ತಿದ್ದಾರೆ. ನಾನು ಪ್ರಚೋದನೆಗೆ ಒಳಗಾಗಲ್ಲ ಎಂದರು.
ವರ್ಗಾವಣೆ ದಂಧೆಗೆ ಅಡ್ಡಗಳನ್ನು ಮಾಡಿಕೊಂಡಿದ್ದಾರೆ. ಈ ದರಪಟ್ಟಿ (Transfer Rate Card) ಅವರೇ ಕೊಟ್ಟಿದ್ದ ಜಾಹೀರಾತಿನ ಮುಂದುವರೆದ ಭಾಗ ಇರಬಹುದು. ವಾಸ್ತವಾಂಶವನ್ನು ಸದನದ ಮುಂದೆ ಇಟ್ಟಿದ್ದೇನೆ. ಭ್ರಷ್ಟಾಚಾರ ನಿಲ್ಲಿಸುವ ಧೈರ್ಯವಿದ್ದರೆ ಕ್ರಮ ಕೈಗೊಳ್ಳಲಿ. ಈ ದರಪಟ್ಟಿ ಈಗ ಇವರ ಅವಧಿಯಲ್ಲೇ ಮಾಡಿದ್ದಾರೆ. ಅಧಿಕಾರಿಗಳಿಂದಲೇ ಈ ಮಾಹಿತಿ ಸೋರಿಕೆ ಆಗಿದೆ ಎಂದು ಹೇಳಿದರು.
ನಾನು ಒಕ್ಕಲಿಗ ಸಮಾಜದಲ್ಲಿ ಯಾರನ್ನೂ ಬೆಳೆಯಲು ಅಡ್ಡಿ ಮಾಡಿಲ್ಲ. ಭ್ರಷ್ಟಾಚಾರದ ದಾಖಲೆ ಇಟ್ಟಿದ್ದಕ್ಕೆ ಜಾತಿ ಬಣ್ಣ ಕಟ್ಟಿದ್ದಾರೆ. ಭ್ರಷ್ಟಾಚಾರಕ್ಕೆ ಯಾವುದಾದರೂ ಜಾತಿ ಇದ್ಯಾ ಎಂದು ಪ್ರಶ್ನಿಸುವ ಮೂಲಕ ಚಲುವರಾಯಸ್ವಾಮಿಗೆ ಟಾಂಗ್ ನೀಡಿದರು