ಬೆಂಗಳೂರು: ಭ್ರಷ್ಟಾಚಾರದ ವಿಷಯ ಬಂದಾಗ ಕೆಲವರಿಗೆ ಜಾತಿ ನೆನಪಾಗಿಬಿಡುತ್ತದೆ. ಅಂತಹ ಸಂದರ್ಭದಲ್ಲಿ ಕೆಲವರು ಜಾತಿಯನ್ನೇ ರಕ್ಷಾ ಕವಚ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಚಿವರೊಬ್ಬರಿಗೆ ಕಟುವಾಗಿ ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು; ಬುಧವಾರ ಸದನದಲ್ಲಿ ಒಂದು ನಿರ್ದಿಷ್ಟ ಇಲಾಖೆಯಲ್ಲಿ ವರ್ಗಾವರ್ಗಿಗಾಗಿ ಸಿದ್ಧಪಡಿಸಲಾಗುವ ರೇಟ್ ಕಾರ್ಡ್ ಬಗ್ಗೆ ಹೇಳಿದ್ದೆ. ಆ ಇಲಾಖೆಗೆ ಸಂಬಂಧಿಸಿದ ಸಚಿವರು ರೇಟ್ ಕಾರ್ಡ್ ಬಗ್ಗೆ ಉತ್ತರ ಕೊಡುವುದು ಬಿಟ್ಟು ತಮ್ಮ ಜಾತಿಯನ್ನು ಎಳೆದು ತಂದಿದ್ದಾರೆ. ಭ್ರಷ್ಟಾಚಾರಕ್ಕೆ ಜಾತಿ ವ್ಯವಸ್ಥೆ ಇದೆಯಾ? ಭ್ರಷ್ಟಾಚಾರದ ಬಗ್ಗೆ ಹೇಳಿದರೆ ಅದಕ್ಕೆ ಜಾತಿ ಬಣ್ಣ ಕಟ್ಟುತ್ತಾರೆ ಎಂದು ಕುಮಾರಸ್ವಾಮಿ ಅವರು ತಿರುಗೇಟು ಕೊಟ್ಟರು.
ನಾವು ನಿರಂತರವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೇವೆ. ಅಧಿಕಾರಿಗಳು ಪೋಸ್ಟಿಂಗ್ ಪಡೆಯಲು ಹಣ ಕೊಡ್ತಿದ್ದಾರೆ. ಅಂತಿಮವಾಗಿ ಅವರು ಜನರ ಜೇಬಿಗೆ ಕೈ ಹಾಕುತ್ತಿದ್ದಾರೆ. ನನಗೆ ಯಾರ ಮೇಲೂ ದ್ವೇಷ, ಅಸಮಾಧಾನ ಇಲ್ಲ. ಅವರು ನಮ್ಮನ್ನು ಬಿಟ್ಟು ಹೋದ ಮೇಲೆ ನಾನು ಅವರ ಬಗ್ಗೆ ಮಾತಾಡೇ ಇಲ್ಲ ಎಂದರು ಮಾಜಿ ಮುಖ್ಯಮಂತ್ರಿಗಳು
ರಾಜ್ಯಪಾಲರ ವಂದನಾ ನಿರ್ಣಯ ಮೇಲೆ ಚರ್ಚೆ ಮಾಡುವಾಗ ಈ ವಿಷಯವನ್ನು ನಾನು ಪ್ರಸ್ತಾಪ ಮಾಡಿದೆ. ಭ್ರಷ್ಟಾಚಾರ ನಿಗ್ರಹಕ್ಕೆ ಸಲಹೆ ನೀಡಿದೆ. ಆ ಸಂದರ್ಭದಲ್ಲಿ ಕೆಲ ಸಲಹೆಗಳನ್ನು ನೀಡಿ, ಭ್ರಷ್ಟಾಚಾರ ನಿಗ್ರಹಕ್ಕೆ ಸಂಪೂರ್ಣ ಬೆಂಬಲ ಇದೆ ಎಂದು ಸದನಕ್ಕೆ ತಿಳಿಸಿದೆ. ಆದರೆ, ಈ ಸರ್ಕಾರಕ್ಕೆ ಸಂಪೂರ್ಣವಾಗಿ ಭ್ರಷ್ಟಾಚಾರ ತೆಗೆಯಲು ಸಾಧ್ಯವಾ? ಈಗ ಎಲ್ಲಾ ಕಡೆ ಹರಿದಾಡುತ್ತಿರುವ ಎಕ್ಸೆಲ್ ಶೀಟ್ ನಾನು ತಯಾರಿಸಿದ್ದಲ್ಲ ಎಂದು ಅವರು ಹೇಳಿದರು
ನಾನು ನಡೆಯುತ್ತಿರುವ ವಿಷಯವನ್ನು ಪ್ರಸ್ತಾಪ ಮಾಡಿದ್ದೇನೆ. ವಾಸ್ತವ ಸಂಗತಿಯನ್ನು ಸದನಕ್ಕೆ ತಿಳಿಸಿದ್ದೇನೆ. ಸರಿಪಡಿಸಿಕೊಳ್ಳೋದು ಬಿಡುವುದು ಅವರಿಗೇ ಬಿಟ್ಟಿದ್ದು. ಹಿಂದಿನ ಸರಕಾರದ ವಿರುದ್ಧ ಇವರೇ ರೇಟ್ ಕಾರ್ಡ್ ಜಾಹೀರಾತು ಕೊಡಲಿಲ್ವಾ? ಎಂದು ಅವರು ಪ್ರಶ್ನಿಸಿದರು.
ಇವರು ಅಡ್ಡ ಮಾಡಿಕೊಂಡಿದ್ದಾರೆ:
ನಾನು ವೆಸ್ಟೆಂಡ್ ಹೋಟೆಲ್ ನಲ್ಲಿ ಅಡ್ಡ ಮಾಡಿಕೊಂಡಿದ್ದೆ ಅಂತ ಇವರು ಹೇಳುತ್ತಿದ್ದರು. ಇವರು ಎಲ್ಲಿ ಅಡ್ಡ ಮಾಡಿಕೊಂಡಿದ್ದಾರೆ ಎನ್ನುವುದು ಗೊತ್ತಿದೆ. ಅಲ್ಲಿ ಏನೇನು ನಡೆಯುತ್ತದೆ? ಎನ್ನುವ ಮಾಹಿತಿಯೂ ಇದೆ ಎಂದು ಆರೋಪ ಮಾಡಿದ್ದವರಿಗೆ ಮಾಜಿ ಮುಖ್ಯಮಂತ್ರಿ ಅವರು ನೇರ ತಿರುಗೇಟು ಕೊಟ್ಟರು.
ನಾನು ದರಪಟ್ಟಿಯನ್ನು ಸಿದ್ಧ ಮಾಡಿಲ್ಲ. ನಾನು ಈ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿ ಜೊತೆಯಲ್ಲಿ ಕೆಲಸ ಮಾಡಿದ್ದೆ.
ನಾನು ತಪ್ಪು ಮಾಡಿಲ್ಲ, ಮಾಡಿದ್ದರೆ ಶಿಕ್ಷೆಗೆ ಸಿದ್ದ. 150 ಕೋಟಿ ರೂಪಾಯಿ ಹಗರಣದ ಆರೋಪವನ್ನು ನನ್ನ ಮೇಲೆ ಮಾಡಿದ್ದರು. ಆಗ ಎಲ್ಲೆಲ್ಲೋ ಹೋಗಿ ಸಿಡಿ ತಯಾರು ಮಾಡಲು ಹೋಗಿದ್ದರು. ಏನೂ ಆಗಲಿಲ್ಲ. ಲೋಕಾಯುಕ್ತಕ್ಕೆ ಕೊಟ್ಟ ಮೇಲೆ ಕಥೆ ಬೇರೆಯೇ ಆಯಿತು. ಆ ಆರೋಪ ಬಂದಾಗ ಕೃಷ್ಣಾದಲ್ಲಿ ಸಭೆ ಕರೆದಿದ್ದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾಗಿದ್ದೆ. ಆ ಸಂದರ್ಭಕ್ಕೆ ಸಾಕ್ಷಿಯಾಗಿದ್ದ ಅನೇಕ ನಾಯಕರು ಈಗಲೂ ಇದ್ದಾರೆ. ಬೇಕಾದರೆ ಕೇಳಿ ತಿಳಿದುಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ನನ್ನಲ್ಲಿರುವ ಪೆನ್ ಡ್ರೈವ್ ಖಾಲಿ ಇಲ್ಲ:
ಪೆನ್ ಡ್ರೈವ್ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ತೀಕ್ಷ್ಣವಾಗಿ ಉತ್ತರ ಕೊಟ್ಟ ಕುಮಾರಸ್ವಾಮಿ ಅವರು; ನನ್ನ ಬಳಿ ಇರುವ ಪೆನ್ ಡ್ರೈವ್ ಖಾಲಿ ಇಲ್ಲ. ಅದು ಆಪರೇಷನ್ ಮಾಡಿದ ಸಿಡಿ ತರ ಅಲ್ಲ. ಅದರಲ್ಲಿ ಖಂಡಿತಾ ದಾಖಲೆ ಇದೆ. ಕಾಂಗ್ರೆಸ್ ನವರಿಗೆ ಇಷ್ಟು ಆತುರ ಏಕೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.
ಕೆಲವರು ನನ್ನ ಬಗ್ಗೆ ಸಾಫ್ಟ್ ಕಾರ್ನರ್ ಆರೋಪ ಮಾಡಿದ್ದಾರೆ. ಹಾಗೇನೂ ಇಲ್ಲ. ಹೇಳಬೇಕಾದ್ದನ್ನು ತೀಕ್ಷ್ಣವಾಗಿಯೇ ಹೇಳಿದ್ದೇನೆ. ಅದರಲ್ಲಿ ಸಾಫ್ಟ್ ಕಾರ್ನರ್ ಪ್ರಶ್ನೆ ಎಲ್ಲಿ? ಇವರ ಸಮಸ್ಯೆ ಬಗ್ಗೆ ಎಲ್ಲವನ್ನೂ ಬಿಚ್ಚಿ ಹೇಳಿದ್ದೇನೆ. ಈ ಬಗ್ಗೆ ಮುಕ್ತವಾಗಿ ಸಲಹೆ ನೀಡಿದ್ದೇನೆ. ಸರಿಪಡಿಸಿಕೊಳ್ಳೋದಾದ್ರೆ ಸರಿಪಡಿಸಿಕೊಳ್ಳಲಿ ಎಂದು ಅವರು ತಿಳಿಸಿದರು.