ಬೆಂಗಳೂರು: ನಾಗರಿಕ ಪಡಿತರ ಸರಬರಾಜು ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ನೀಡುತ್ತಿದ್ದ ಅಕ್ಕಿಯನ್ನು ಅಷ್ಟೇ ನೀಡಲಾಗುತ್ತಿದೆ. ಆದರೆ, ಎಲ್ಲೆಲ್ಲಿ ಜನರು ತಮ್ಮ ಊಟದಲ್ಲಿ ರಾಗಿಯನ್ನು ಹೆಚ್ಚಾಗಿ ಬಳಸುತ್ತಾರೋ ಅವರಿಗೆ ಮೂರು ಕೆಜಿ ಅಕ್ಕಿ ಹಾಗೂ 2 ಕೆಜಿ ರಾಗಿಯನ್ನು ನೀಡಲಾಗುತ್ತಿದೆ ಎಂದು ರಾಜ್ಯ ಆಹಾರ ನಿಗಮದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆಹಾರ ಭದ್ರತಾ ಕಾಯ್ದೆಯಡಿ, ಕೇಂದ್ರ ಸರ್ಕಾರದಿಂದ ನೀಡಲಾಗುವ 5 ಕೆಜಿ ಅಕ್ಕಿಯ ಪ್ರಮಾಣವನ್ನು ರಾಜ್ಯ ಸರ್ಕಾರ ಮೊಟಕು ಮಾಡಿದೆ. 5 ಕೆಜಿ ಅಕ್ಕಿಯ ಬದಲಿಗೆ 3 ಕೆಜಿ ಅಕ್ಕಿ ಹಾಗೂ 2 ಕೆಜಿ ರಾಗಿ ಅಥವಾ ಜೋಳವನ್ನು ನೀಡುತ್ತಿದೆ ಎಂಬ ವಿಚಾರ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವರದಿಗಳು ಸಾರ್ವಜನಿಕವಾಗಿ ಹೊಸ ಚರ್ಚೆಗೆ ನಾಂದಿ ಹಾಡಿದ್ದವು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸರ್ಕಾರದ ಈ ನಡೆಯನ್ನು ಟೀಕಿಸಿದ್ದರು.
ರಾಗಿ, ಜೋಳ ಏಕೆ? ಅಧಿಕಾರಿಗಳ ವಿವರಣೆಯೇನು?
”ಪೂರ್ತಿಯಾಗಿ 5 ಕೆಜಿ ಅಕ್ಕಿಯನ್ನೇ ನೀಡಬಹುದಲ್ಲವೇ, ರಾಗಿ, ಜೋಳ ಏಕೆ” ಎಂದು ಕೇಳಲಾದ ಪ್ರಶ್ನೆಗೆ ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿರುವ ಅಧಿಕಾರಿಗಳು, “ಆಹಾರದಲ್ಲಿ ರಾಗಿ ಬೆಳೆಸುವಂಥ ವಲಯಗಳಲ್ಲಿ ಅಕ್ಕಿ ಜೊತೆಗೆ ರಾಗಿಯನ್ನು ಕೊಡಲು ನಿರ್ಧರಿಸಲಾಗಿದೆ. ಹಾಗೆಯೇ, ಜೋಳ ಬಳಸುವಂಥ ವಲಯಗಳಲ್ಲಿ ಜೋಳವನ್ನು ಕೊಡಲಾಗುತ್ತದೆ. ಇನ್ನು, ರಾಗಿ, ಜೋಳ ಯಾವುದೂ ಬಳಸದೇ ಕೇವಲ ಅಕ್ಕಿಯನ್ನೇ ಬಳಸುವ ವಲಯಗಳಲ್ಲಿ ಪೂರ್ತಿ 5 ಕೆಜಿ ಅಕ್ಕಿಯನ್ನೇ ನೀಡಲಾಗುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.