ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ವಿಕ್ರಂ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಹೊತ್ತ ಜಿಎಸ್ಎಲ್ವಿ ಮಾರ್ಕ್ 3 ಅಥವಾ ಲಾಂಚ್ ವೆಹಿಕಲ್ ಮಾರ್ಕ್-3 ‘ಬಾಹುಬಲಿ ರಾಕೆಟ್’ ಆಗಸದತ್ತ ಚಿಮ್ಮಿದೆ.
ಇಸ್ರೋ ತನ್ನ ಪ್ರತಿಷ್ಠಿತ ಯೋಜನೆಯ ಉಡಾವಣೆಯನ್ನು ಯಶಸ್ವಿಯಾಗಿ ನೆರವೇರಿಸುತ್ತಿದ್ದಂತೆಯೇ ಕೋಟ್ಯಂತರ ಭಾರತೀಯರ ಸಂಭ್ರಮ ಮುಗಿಲು ಮುಟ್ಟಿದೆ. ಸಾವಿರಾರು ಜನರು ಶ್ರೀಹರಿಕೋಟಾದಿಂದ ಈ ಅಪರೂಪದ ವಿದ್ಯಮಾನವನ್ನು ನೇರವಾಗಿ ಕಣ್ತುಂಬಿಕೊಂಡರು. ರಾಕೆಟ್ ಉರಿಯುವ ಬೆಂಕಿಯೊಂದಿಗೆ ಮೇಲಕ್ಕೆ ಚಿಮ್ಮುತ್ತಿದ್ದಂತೆ ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದರು. ಕೊನೆಯ ಹಂತದಲ್ಲಿ ಯಾವುದೇ ಅಡೆತಡೆ ಎದುರಾಗದೆ ಇರಲಿ ಎಂಬ ಪ್ರಾರ್ಥನೆ, ಆತಂಕದೊಂದಿಗೆ ಕಾಯುತ್ತಿದ್ದ ವಿಜ್ಞಾನಿಗಳು ನಿಟ್ಟುಸಿರುಬಿಟ್ಟರು.
2019ರ ಜುಲೈನಲ್ಲಿ ಚಂದ್ರಯಾನ-2 ಯೋಜನೆ ಉಡಾವಣೆ ನಡೆದಿತ್ತು. ಆದರೆ ಅದರಲ್ಲಿ ವಿಕ್ರಂ ಲ್ಯಾಂಡರ್ ನಿಧಾನಗತಿಯಲ್ಲಿ ಚಂದಿರನ ದಕ್ಷಿಣ ಧ್ರುವದ ಮೇಲೆ ತನ್ನ ಕಾಲುಗಳನ್ನು ಇರಿಸುವಲ್ಲಿ ವಿಫಲವಾಗಿತ್ತು. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಈಗಾಗಲೇ ಚಂದ್ರನಲ್ಲಿ ನೌಕೆಗಳನ್ನು ಇಳಿಸಿವೆ. ಆದರೆ ಇದೆಲ್ಲವೂ ನಡೆದಿರುವುದು ಚಂದ್ರನ ಉತ್ತರ ಧ್ರುವದಲ್ಲಿ. ಭೂಮಿಯ ಕಣ್ಣಿಗೆ ಕಾಣದ ದಕ್ಷಿಣ ಧ್ರುವ ಈಗ ಕೌತುಕದ ಕೇಂದ್ರ.