ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಸಿಸಿಬಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆದಿದ್ದು ಪುಷ್ಪಾ ಸಿನಿಮಾ ರೀತಿಯಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ಕುಖ್ಯಾತ ಗಾಂಜಾ ಪೆಡ್ಲರ್ ಸೇರಿದಂತೆ ಮೂವರು ಆರೋಪಿಗಳನ್ನ ಸೆರೆಹಿಡಿದು ಅವರ ಬಳಿ ಇದ್ದ ಬರೋಬ್ಬರಿ 12 ಕೋಟಿ ಮೌಲ್ಯದ 1500 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಬೆಂಗಳೂರು ನಗರ ಸಿಸಿಬಿ ವಿಭಾಗದ ಮಹಿಳಾ ಸಂರಕ್ಷಕ ದಳದ ಪೊಲೀಸರಿಗೆ ಗಾಂಜಾ ಮಾರಾಟದ ಸುಳಿವು ಸಿಕ್ಕಿತ್ತು. ಅದರಂತೆ ಕಳೆದ ಮೂರು ವಾರಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದ ಸಿಸಿಬಿ ಪೊಲೀಸರು, ಕುಖ್ಯಾತ ಗಾಂಜಾ ಪೆಡ್ಲರ್ ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಾಂಜಾ ಪೂರೈಕೆ ಮಾಡಲು ಗೂಡ್ಸ್ ವಾಹನದ ಚಾರ್ಸಿ ಮಾರ್ಪಾಡು ಮಾಡಲಾಗಿದೆ. ಅಸಲಿ ಚಾರ್ಸಿ ಅಡಿಯಲ್ಲಿ ಒಂದು ಅಡಿ ಎತ್ತರದ ಸೀಕ್ರೇಟ್ ಚಾರ್ಸಿ ನಿರ್ಮಾಣ ಮಾಡಲಾಗಿದೆ. ಅದರಲ್ಲಿ ಗಾಂಜಾ ಪ್ಯಾಕ್ಗಳನ್ನ ಜೋಡಿಸಿ ಮುಚ್ಚಲಾಗುತ್ತಿತ್ತು. ಬಳಿಕ ಮೇಲೆ ಖಾಲಿ ಕಾಟನ್ ಬಾಕ್ಸ್ಗಳನ್ನು ತುಂಬಿಕೊಂಡು ಬರುತ್ತಿದ್ದರು. ಯಾರಿಗೂ ಅನುಮಾನ ಬರದಂತೆ ಆಂಧ್ರದ ವಿಶಾಕಪಟ್ಟಣದಿಂದ ಬೆಂಗಳೂರಿಗೆ ತರುತ್ತಿದ್ದರು.
ಸೀಕ್ರೇಟ್ ಕಂಪಾರ್ಟ್ಮೆಂಟ್ ಮೂಲಕ ಸಾವಿರಾರು ಕೆಜಿ ಗಾಂಜಾ ಸಪ್ಲೈ ಮಾಡುತ್ತಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಮಹಿಳಾ ರಕ್ಷಣಾ ದಳ ಅಖಾಡಕ್ಕಿಳಿದಿತ್ತು. ಮೂರು ವಾರಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.