ಬೆಂಗಳೂರು : ತಮ್ಮ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದೇ ಇಲ್ಲ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಭ್ರಷ್ಟಾಚಾರದಲ್ಲಿ ಸಿಲುಕಿರುವ ಭಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraja Bommai) ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಾಲದಲ್ಲಿ ಯಾವುದೇ ಭ್ರಷ್ಟಾಚಾರ ನಡೆದೇ ಇಲ್ಲ ಎಂದು ಹೇಳಿದ್ದಾರೆ. ಅವರ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆಯದಿದ್ದರೆ 2013ರಿಂದ ಎಲ್ಲ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಅವರ ಕಾಲದಲ್ಲಿ ಭ್ರಷ್ಟಾಚಾರ ನಡೆಯದಿದ್ದರೆ ನ್ಯಾಯಾಂಗ ಆಯೋಗ ರಚನೆ ಏಕಾಯಿತು? ಎಸಿಬಿ ಮಾಡಿದ್ದೇ ಭ್ರಷ್ಟಾಚಾರ ಮುಚ್ಚಿ ಹಾಕಲು. ಇದು ಇಡೀ ಜಗತ್ತಿಗೆ ಗೊತ್ತಿದೆ. ಸಣ್ಣ ನೀರಾವರಿ, ದೊಡ್ಡ ನೀರಾವರಿ ಎಲ್ಲದರಲ್ಲೂ ಭ್ರಷ್ಟಾಚಾರ ನಡೆದಿದೆ. ಅವರಿಗೆ ಭಯ ಇಲ್ಲದಿದ್ದರೆ 2013ರಿಂದ ಎಲ್ಲ ಪ್ರಕರಣಗಳನ್ನು ತನಿಖೆಗೆ ವಹಿಸಲಿ. ಅವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಸಿಲುಕಿಕೊಳ್ಳುವ ಭಯ ಇದೆ ಎಂದರು. ಯಡಿಯೂರಪ್ಪ ಅವರು ತಮ್ಮ ಕಾಲದ ಅವಧಿಯ ಅಕ್ರಮ ಗಣಿಗಾರಿಕೆಯ ಪ್ರಕರಣಗಳನ್ನು ತನಿಖೆಗೆ ನೀಡಿದ್ದರು ಎಂದರು.