ಬೆಂಗಳೂರು ;– ಪಕ್ಷ ಸೂಚಿಸಿದರೆ ಲೋಕಸಭೆಗೆ ಸ್ಪರ್ಧೆಗೆ ಸಿದ್ಧನಿದ್ದೇನೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಈ ಸಂಬಂಧ ಬೆಳಗಾವಿಯಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ಸೂಚಿಸಿದರೆ ಸ್ಪರ್ಧೆಗೆ ಸಿದ್ಧನಿದ್ದೇನೆ.
ರಾಜಕೀಯದಲ್ಲಿ ಯಾವುದನ್ನೂ ಹೇಳಲಿಕ್ಕೆ ಆಗುವುದಿಲ್ಲ. ಕೊನೆ ಗಳಿಗೆಯಲ್ಲಿ ಏನಾದರೂ ಆಗಬಹುದು. ಪಕ್ಷದ ಹೈಕಮಾಂಡ್ ಸೂಚನೆ ನೀಡಿದರೆ ಲೋಕಸಭೆಗೆ ಸ್ಪರ್ಧಿಸುವುದಾಗಿ ತಿಳಿಸಿದರು.
ಲೋಕಸಭಾ ಚುನಾವಣೆ ಸಂಬಂಧ ಇತ್ತೀಚೆಗೆ ಬೆಂಗಳೂರಿನಲ್ಲಿ ಸಭೆ ನಡೆದಿದೆ. ಆಕಾಂಕ್ಷಿಗಳ ದೊಡ್ಡ ಲಿಸ್ಟ್ ಇದೆ. ಇನ್ನೆರಡು ತಿಂಗಳಲ್ಲಿ ಬೆಳಗಾವಿ, ಚಿಕ್ಕೋಡಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು. ನಮ್ಮ ಕುಟುಂಬದಿಂದ ಯಾರಾದರೂ ಚುನಾವಣೆಗೆ ಸ್ಪರ್ಧೆ ಕುರಿತು ಸರ್ವೆ ಆಗಬೇಕು. ನಮ್ಮ ಬೇಡಿಕೆ ಮೇಲೆ ಚುನಾವಣೆ ನಡೆಯುವುದಿಲ್ಲ. ಪಬ್ಲಿಕ್ ಡಿಮ್ಯಾಂಡ್ ಮೇಲೆ ಚುನಾವಣೆ
ನಡೆಯುತ್ತದೆ ಎಂದರು.
ಬಹಳಷ್ಟುಜನ ಚಿಕ್ಕೋಡಿ ಟಿಕೆಟ್ ನೀಡಿದರೆ ಕಾಂಗ್ರೆಸ್ಗೆ ಬರುವುದಾಗಿ ಹೇಳಿದ್ದಾರೆ. ಪಕ್ಷಕ್ಕಾಗಿ ಬರುವವರು ಬರಲಿ. ಅದನ್ನು ಸ್ಥಳೀಯರು ಹಾಗೂ ನಾವು ಸೇರಿ ಅವರ ಹೆಸರು ಶಿಫಾರಸು ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಎರಡೂವರೆ ವರ್ಷ ಸಿಎಂ ಆಗಿರುತ್ತಾರೆ ಎಂಬುವುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಕುಮಾರಸ್ವಾಮಿಗೆ ಬಿಜೆಪಿಯ ಮೇಲೆ ಲವ್ ಆಗಿದೆಯೇ ಎಂಬುವುದರ ಕುರಿತು ಸಮಯ ಬಂದಾಗ ಉತ್ತರ ನೀಡುತ್ತೇನೆ ಎಂದರು.