ಬೆಂಗಳೂರು ;- ಎಲ್ಲ ಕೈಗಾರಿಕಾ ಪ್ರದೇಶಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಈ ಸಂಬಂಧ ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಎಲ್ಲ ಕೈಗಾರಿಕಾ ಪ್ರದೇಶಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಒಂದು ಅವಧಿಗೆ ಕ್ರಮ ಕೈಗೊಂಡು, ಮುಂದಿನ ಹಂತದ ನಿರ್ವಹಣೆಯನ್ನು ಸ್ಥಳಿಯ ಕೈಗಾರಿಕಾ ಸಂಘಗಳಿಗೆ ಒಪ್ಪಿಸಲು ಕ್ರಮವಹಿಸುವುದು.
ರಾಜ್ಯದ ಬಹುತೇಕ ಕೈಗಾರಿಕಾ ಪ್ರದೇಶಗಳ ಮೂಲ ಸೌಲಭ್ಯಗಳು ಉನ್ನತೀಕರಣಗೊಳ್ಳಬೇಕಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಒಂದು ಅವಧಿಗೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಪುನರಾಭಿವೃದ್ಧಿಯ ಬಳಿಕ ಸದರಿ ಕೈಗಾರಿಕಾ ಪ್ರದೇಶಗಳ ನಿರ್ವಹಣೆಯನ್ನು ಸ್ಥಳೀಯ ಕೈಗಾರಿಕಾ ಸಂಘಗಳಿಗೆ ವಹಿಸಲಾಗುವುದು. ಸಂಗ್ರಹವಾಗುವ ಆರ್ಥಿಕ ಸಂಪನ್ಮೂಲದಲ್ಲಿ ಶೇ.70ರಷ್ಟನ್ನು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಬಳಕೆ ಮಾಡಿ, ಬಾಕಿ ಉಳಿದ ಶೇ.30ರಷ್ಟನ್ನು ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗುವುದು ಎಂದರು.
ಆಪಲ್ ಫೋನ್ ತಯಾರಿಸುವ ಫಾಕ್ಸೋನ್ ಸಂಸ್ಥೆ ದೊಡ್ಡ ಬಳ್ಳಾಪುರದಲ್ಲಿ 300 ಎಕರೆಯಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಮುಂದೆ ಬಂದಿದೆ. ಒಂದು ಬಿಲಿಯನ್ ಡಾಲರ್ ಸುಮಾರು 8 ಸಾವಿರ ಕೋಟಿ ರೂಪಾಯಿ ಹೂಡಿಕೆಯ ಈ ಘಟಕದಿಂದ ಮೊದಲ ಹಂತದಲ್ಲಿ 50 ಸಾವಿರ ಉದ್ಯೋಗಗಳು ಸೃಷ್ಟಿಯಾಗಿವೆ. ಸಂಸ್ಥೆಗೆ ಭೂಮಿ ಮಂಜೂರಿಗೆ ಕೆಲ ಸಮಸ್ಯೆಗಳಿದ್ದವು, ತಾವೇ ಖುದ್ದಾಗಿ ನಾಲ್ಕು ಬಾರಿ ಸಭೆ ನಡೆಸಿ ಬಗೆ ಹರಿಸಿದ್ದೇನೆ. ಸಂಸ್ಥೆಯನ್ನು ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.