ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಅಂಗನವಾಡಿಯಲ್ಲಿ ಕೊಳೆತ ಮೊಟ್ಟೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಈ ಹಿನ್ನೆಲೆಯಲ್ಲಿ ಬಿಸಿಯೂಟದ ಸಿಬ್ಬಂದಿಗಳಿಗೆ ಶಿಕ್ಷಣ ಇಲಾಖೆಯೂ ಮಹತ್ವದ ಮಾರ್ಗ ಸೂಚಿಗಳನ್ನು ಬಿಡುಗಡೆಗೊಳಿಸಿದ್ದು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಿದೆ.
ರಾಜ್ಯದ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಕೆಯ ಅಡುಗೆ ಸಿಬ್ಬಂದಿಗಳಿಗೆ ಶಿಕ್ಷಣ ಇಲಾಖೆಯು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ್ದು ಮಧ್ಯಾಹ್ನದ ಬಿಸಿಯೂಟದಲ್ಲಿ ನೈರ್ಮಲ್ಯ, ಸ್ವಚ್ಛತೆ, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಏಪ್ರಾನ್, ತಲೆಗವಸು, ಕೈಗವಸು ಕಡ್ಡಾಯಗೊಳಿಸಿದೆ.
ಇದಲ್ಲದೇ ಅಡುಗೆ ಕೋಣೆ ಸ್ವಚ್ಛ ಹಾಗೂ ಧೂಳು ರಹಿತವಾಗಿ ಇರುವಂತೆ ನೋಡಿಕೊಳ್ಳಬೇಕು, ಶುದ್ಧ ನೀರಿನಲ್ಲಿ ಪಾತ್ರೆ ಪರಿಕರಗಳನ್ನು ತೊಳೆಯಬೇಕು. ಗೋಡೆ, ಕಿಟಕಿಗಳು ಹಲ್ಲಿ, ಜೇಡ, ಜಿರಳೆ, ನೊಣಗಳಿಂದ ಮುಕ್ತವಾಗಿರಬೇಕು, ಆಹಾರ ಧಾನ್ಯಗಳಲ್ಲಿ ಕ್ರಿಮಿ, ಕೀಟಗಳು ಇಲ್ಲದಿರುವುದನ್ನು ನೋಡಿಕೊಂಡು ಅಡುಗೆಗೆ ಬಳಕೆ ಮಾಡುವಂತೆ ಸೂಚನೆ ನೀಡಿದೆ.
ಇನ್ನೂ ಸಿದ್ಧಪಡಿಸಿದ ಆಹಾರದ ಪಾತ್ರೆಗಳನ್ನು ಸುರಕ್ಷಿತವಾಗಿ ಮುಚ್ಚಿಡಬೇಕು, ಹಸಿ ಸೊಪ್ಪು ತರಕಾರಿಗಳನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆದು ಸಾಂಬಾರ್ ಮಾಡಬೇಕು, ಸಿದ್ಧಪಡಿಸಿದ ಆಹಾರ ವಿತರಿಸೋ ಮುನ್ನ ಶುಚಿ-ರುಚಿ ಪರೀಕ್ಷಿಸಿ ಅಭಿಪ್ರಾಯ ದಾಖಲಿಸುವಂತೆಯೂ ಶಿಕ್ಷಣ ಇಲಾಖೆಯೂ ಸೂಚನೆ ನೀಡಿದೆ.