ಡೊಮಿನಿಕಾ: ಕೆರಿಬಿಯನ್ ನಾಡಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 141 ರನ್ ಗೆಲುವು ಸಾಧಿಸಿದ್ದು, ನಾಯಕ ರೋಹಿತ್ ಶರ್ಮಾ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ನಾಯಕತ್ವದ ದೀರ್ಘಕಾಲದ ದಾಖಲೆ ಮುರಿದು ಗಮನ ಸೆಳೆದಿದ್ದಾರೆ.
ಡೊಮಿನಿಕಾದ ವಿಂಡ್ಸರ್ ಪಾರ್ಕ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬ್ಯಾಟ್ ಮಾಡಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (60 ಕ್ಕೆ 5) ಬೌಲಿಂಗ್ ದಾಳಿಗೆ ಸಿಲುಕಿ 150 ರನ್ ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ತಮ್ಮ ಮೊದಲ ಇನಿಂಗ್ಸ್ ನಲ್ಲಿ ಯುವ ಆಟಗಾರ ಯಶಸ್ವಿ ಜೈಸ್ವಾಲ್ (171 ರನ್), ನಾಯಕ ರೋಹಿತ್ ಶರ್ಮಾ (103ರನ್) ಮನಮೋಹಕ ಶತಕ
ಹಾಗೂ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ (76 ರನ್) ಅರ್ಧಶತಕ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 421 ಬೃಹತ್ ಮೊತ್ತ ದಾಖಲಿಸಿ ಡಿಕ್ಲೇರ್ಡ್ ಘೋಷಿಸಿತು. ದ್ವಿತೀಯ ಇನಿಂಗ್ಸ್ ನಲ್ಲೂ ಆರ್.ಅಶ್ವಿನ್ ಸ್ಪಿನ್ ಮೋಡಿಗೆ (71 ಕ್ಕೆ 7) ನಲುಗಿ 130 ರನ್ ಗಳಿಗೆ ಸರ್ವಪತನ ಕಂಡು ಇನಿಂಗ್ಸ್ ಹಾಗೂ 141 ರನ್ ಸೋಲು ಕಂಡ ವೆಸ್ಟ್ ಇಂಡೀಸ್ ಸರಣಿಯಲ್ಲಿ 1-0 ಹಿನ್ನಡೆ ಅನುಭವಿಸಿದೆ.
ಸಚಿನ್ ದಾಖಲೆ ಮುರಿದ ಹಿಟ್ ಮ್ಯಾನ್
ತಮ್ಮ ಕ್ರಿಕೆಟ್ ಜೀವನದಲ್ಲಿ ಹಲವಾರು ದಾಖಲೆ ನಿರ್ಮಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಆಟಗಾರನಾಗಿ ಯಶಸ್ಸು ಕಂಡಷ್ಟು ನಾಯಕರಾಗಿ ಗಮನ ಸೆಳೆದಿಲ್ಲ. ಸಚಿನ್ ತೆಂಡೂಲ್ಕರ್ ತಮ್ಮ ನಾಯಕತ್ವದಲ್ಲಿ 25 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ.