ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕನ್ನಡ ಭಾಷೆಯ ಪರಿಜ್ಞಾನ ಇದೆ ಎಂದು ಭಾವಿಸಿದ್ದೆ. ಆದರೆ, ಅದು ಸುಳ್ಳು ಎನ್ನುವುದು ಈಚೆಗೆ ವಿಧಾನ ಪರಿಷತ್ ನಲ್ಲಿ ಅವರು ರಾಜ್ಯಪಾಲರ ಭಾಷಣದ ಮೇಲೆ ಉತ್ತರ ಕೊಟ್ಟಾಗ ನನಗೆ ಗೊತ್ತಾಯಿತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕುಟುಕಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; 123 ಕ್ಷೇತ್ರ ಗೆಲ್ಲದಿದ್ದರೆ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಈಗೆಲ್ಲಿ ವಿಸರ್ಜನೆ ಮಾಡಿದ್ದಾರೆ? ಎಂದು ನನ್ನನ್ನು ಪ್ರಶ್ನೆ ಮಾಡಿದ್ದಾರೆ. ಆದರೆ, ಅವರ ಅಜ್ಞಾನಕ್ಕೆ ನನ್ನ ಮರುಕವಿದೆ ಎಂದರು.
ನಾನು ಚುನಾವಣೆ ಪ್ರಚಾರ ಹಾಗೂ ಪಂಚರತ್ನ ರಥಯಾತ್ರೆಯಲ್ಲಿ ನೂರಾರು ಕಡೆ ಭಾಷಣ ಮಾಡಿದ್ದೇನೆ. ಪತ್ರಿಕೆಗಳ ವರದಿಗಳನ್ನು ನೋಡಲಿ, ವಿದ್ಯುನ್ಮಾನ ಮಾಧ್ಯಮಗಳ ವೀಡಿಯೊಗಳನ್ನು ವೀಕ್ಷಿಸಲಿ. ಆಮೇಲೆ ಈ ಬಗ್ಗೆ ಮುಖ್ಯಮಂತ್ರಿ ಮಾತನಾಡಲಿ ಎಂದು ಕುಮಾರಸ್ವಾಮಿ ಅವರು ಸಿಎಂಗೆ ಟಾಂಗ್ ನೀಡಿದರು.
ನಾನು ಜನರನ್ನ ಕೇಳಿದ್ದು ಇಷ್ಟೇ. ನನಗೆ 123 ಸೀಟು ಕೊಡಿ. ಅಷ್ಟು ಸೀಟು ಕೊಟ್ಟ ಮೇಲೆ ನಾನು ಪಂಚರತ್ನ ಯೋಜನೆಗಳನ್ನು ಜಾರಿ ಮಾಡದೆ ಇದ್ದರೆ ಮುಂದೆಂದೂ ಮತ ಕೇಳಲು ನಿಮ್ಮ ಮನೆ ಬಾಗಿಲಿಗೆ ಬರುವುದಿಲ್ಲ, ಅದರ ಬದಲಿಗೆ ಪಕ್ಷವನ್ನೇ ವಿಸರ್ಜನೆ ಮಾಡುವೆ ಎಂದಿದ್ದೆ. ನನಗೆ 123 ಸೀಟು ಎಲ್ಲಿ ಬಂದವು, ಹಾಗಿದ್ದ ಮೇಲೆ ಪಕ್ಷ ವಿಸರ್ಜನೆ ಮಾತೆಲ್ಲಿ ಬಂತು ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಬಹುಶಃ ಮುಖ್ಯಮಂತ್ರಿಗೆ ಕನ್ನಡ ಬರುವುದಿಲ್ಲವೋ ಅಥವಾ ಅರ್ಥವಾಗದು ಏನೋ. ಮೊದಲು ನನ್ನ ಹೇಳಿಕೆಗಳ ಬಗ್ಗೆ ಅವರು ಮಾಹಿತಿ ಪಡೆಯಲಿ. ಅವರು ಸದನಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಇಂದು ಅವರು ಆಕ್ರೋಶ ವ್ಯಕ್ತಪಡಿಸಿದರು.