ಬೆಂಗಳೂರು ;– ಘಟಬಂಧನಕ್ಕಾಗಿ ಬಂದ ಹೊರರಾಜ್ಯದ ರಾಜಕಾರಣಿಗಳ ಸೇವೆಗೆ ರಾಜ್ಯದ IAS ಅಧಿಕಾರಿಗಳ ಬಳಕೆ ಮಾಡಿಕೊಂಡಿರುವ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಅಧಿಕಾರ ಬಂಧನಕ್ಕಾಗಿ ಘಟಬಂಧನಕ್ಕೆ ಒಳಗಾದ ಕಾಂಗ್ರೆಸ್ ಪಕ್ಷವು ಕರ್ನಾಟಕದ ಹೆಮ್ಮೆ, ಪರಂಪರೆ,ಸ್ವಾಭಿಮಾನಕ್ಕೆ ಘಟಶ್ರಾದ್ಧ ಮಾಡಿದೆ.
ಘಟಬಂಧನಕ್ಕೆ ಬಂದ ಹೊರರಾಜ್ಯದ ರಾಜಕಾರಣಿಗಳ ಸೇವೆಗೆ ರಾಜ್ಯದ ಹೆಮ್ಮೆಯ ಐಎಎಸ್ ಅಧಿಕಾರಿಗಳನ್ನು ಕಳಿಸಿದ ಕಾಂಗ್ರೆಸ್ ಸರಕಾರದ ನಡೆ ತಪ್ಪು. ನುಡಿದಂತೆ ನಡೆಯುವುದು ಎಂದರೆ ಇದೇನಾ? ಎಂದು ಪ್ರಶ್ನಿಸಿದ್ದಾರೆ.
ಇದು ರಾಜ್ಯ ಸರಕಾರಿ ಕಾರ್ಯಕ್ರಮ ಅಲ್ಲ, ಹೊಸ ಸರಕಾರದ ಪ್ರಮಾಣ ಸ್ವೀಕಾರವೂ ಅಲ್ಲ. ಕೇವಲ ರಾಜಕೀಯ ಸಭೆಯಷ್ಟೇ. ಇಂಥ ಸಭೆಗೆ ಬಂದ ರಾಜಕೀಯ ನಾಯಕರಿಗೆ ಆಥಿತ್ಯ ನೀಡಲು ಜವಾಬ್ದಾರಿಯುತ ಅಧಿಕಾರಿಗಳನ್ನು ಕಳಿಸಿದ್ದು ಆರೂವರೆ ಕೋಟಿ ಕನ್ನಡಿಗರಿಗೆ ಎಸಗಿದ ಘೋರ ಅಪಚಾರ ಹಾಗೂ ರಾಜ್ಯದ ಪಾಲಿಗೆ ಮಹಾ ದುರಂತ ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
135 ಸೀಟು ಕೊಟ್ಟ ತಪ್ಪಿಗೆ ಕನ್ನಡಿಗರಿಗೆ ವಿಪರೀತ ದರ್ಪ ತೋರಿದೆ ಕಾಂಗ್ರೆಸ್. ಸತ್ಯಯುಗದಲ್ಲಿ ಹಿರಣ್ಯಕಶಿಪು ಅಷ್ಟದಿಕ್ಪಾಲಕರನ್ನು ಸೆರೆಹಿಡಿದು ಮೆಟ್ಟಿಲು ಮಾಡಿಕೊಂಡ ಪಾಪಕ್ಕೆ ಸರ್ವನಾಶವಾದ. ಕಾಂಗ್ರೆಸ್ ಕೂಡ 30 ಐಎಎಸ್ ಅಧಿಕಾರಿಗಳನ್ನು ರಾಜಕಾರಣಿಗಳ ದ್ವಾರಪಾಲಕರನ್ನಾಗಿ ಮಾಡುವ ಮೂಲಕ ತನ್ನ ನಾಶಕ್ಕೆ ತಾನೇ ನಾಂದಿ ಹಾಡಿದೆ ಎಂದು ಕಿಡಿಕಾರಿದ್ದಾರೆ.
ಬಂಡವಾಳಶಾಹಿ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿರುವ ಕಾಂಗ್ರೆಸ್ ಪಕ್ಷ, ರಾಜ್ಯದಲ್ಲಿ ‘ಐಎಎಸ್ ಜೀತ ಪದ್ಧತಿ’ಯನ್ನು ಜಾರಿಗೆ ತರುವ ಮೂಲಕ ಹೊಸ ನಮೂನೆಯ ‘ರಾಜಕೀಯ, ಆಡಳಿತ ವಸಾಹತುಶಾಹಿ’ಯನ್ನು ದೇಶಕ್ಕೆ ಪರಿಚಯ ಮಾಡಿದೆ. ಹೌದು; ಕಾಂಗ್ರೆಸ್ ಯಾವಾಗಲೂ ಕುಖ್ಯಾತಿಗಳಿಗೇ ಕುಖ್ಯಾತಿ. ಅಂಥ ಅಪಾಯಕಾರಿ ಹಸ್ತವಾಸಿಯೇ ಕೈ ಪಕ್ಷದ ಆಸ್ತಿ ಎಂದು ವಾಗ್ದಾಳಿ ನಡೆಸಿದ್ದಾರೆ.