ಬೆಂಗಳೂರು : ಈ ಬಾರಿ ಪ್ರಧಾನಿ ನರೇಂದ್ರ ಮೋದಿಗೆ ಮೆಜಾರಿಟಿ ಸಿಗೋದಿಲ್ಲ. ಅವರು ಸೋಲ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ಧಾಂತದ ಬಗ್ಗೆ ಅವರಿಗೆ ಈಗ ಅರಿವಾಯ್ತಾ? ಎಂದು ಕಿಡಿಕಾರಿದರು.
ಮಹಾಘಟಬಂಧನ್ ಅಂತ ಬಂದು ನಂತರ ಏನಾಯ್ತು ನೋಡಿದ್ರಲ್ಲಾ ಎಂಬ ಹೆಚ್.ಡಿ ಕುಮಾರಸ್ವಾಮಿ ಆರೋಪ ವಿಚಾರವಾಗಿ ಮಾತನಾಡಿ, ಅವರನ್ನೆಲ್ಲಾ ಕರೆದಿದ್ದವರು ಯಾರು? ಅದನ್ನು ಮುಂದುವರೆಸಿದ್ರಾ? ಅವರು ಬಂದು ಇನ್ವೈಟ್ ಮಾಡಿದ್ರು, ಅದನ್ನು ಮುಂದುವರೆಸಲಿಲ್ಲ. ಅಲ್ಲಿಗೆ ನಿಂತೋಯ್ತು. ಅವರೆಲ್ಲಾ ಬಂದಿದ್ರು, ಹೋದ್ರು ಎಂದು ಛೇಡಿಸಿದರು.
ಜೆಡಿಎಸ್ ಪಕ್ಷಕ್ಕೆ ಸಿದ್ಧಾಂತವೇ ಇಲ್ಲ. ಬಿಜೆಪಿ ಜೊತೆಗೆ ಹೋದರೂ ಜಾತ್ಯಾತೀತನಾ? ನಿತೀಶ್ ಕುಮಾರ್ ಸಿದ್ದಾಂತ ವಿಚಾರ ಅವರಿಗೆ ಯಾಕೆ ಬೇಕು. ಅವರ ವಿಚಾರ ಬೇಡ ಎಂದು ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ಇದು ಬೆಂಗಳೂರಿನಲ್ಲಿ ಎರಡನೇ ಸಭೆ ನಡೆಯುತ್ತಿದೆ. ಸುಮಾರು 24 ಪಕ್ಷದ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಎಲ್ಲಾ ವಿಪಕ್ಷ ನಾಯಕರು ಕೂಡ ಭಾಗಿಯಾಗುತ್ತಿದ್ದಾರೆ. ಇಂದು ಈ ಬಗ್ಗೆ ಚರ್ಚೆ ನಡೆಯಲಿದೆ. ಮುಂದಿನ ಲೋಕಸಭಾ ಚುನಾವಣೆಗೆ ಒಟ್ಟುಗೂಡಿ ಚುನಾವಣೆ ನಡೆಸಬೇಕು ಅನ್ನೋದು ಅಜೆಂಡಾ. ಹಾಗಾಗಿ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.