ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರಿಗೆ ತ್ವರಿತ ಸಾರಿಗೆ ಸೇವೆ ನೀಡಿರುವ ಸರ್ಕಾರ ಈಗ ಮತ್ತೊಂದು ವಿನೂತನ ಪ್ರಯೋಗದ ಮೂಲಕ ಈ ಭಾಗದ ಜನರಿಗೆ ಗುಣಮಟ್ಟದ ಸೇವೆ ಒದಗಿಸಲು ಚಿಂತನೆ ನಡೆಸಿದೆ. ಹಾಗಿದ್ದರೇ ಏನಿದು ಯೋಜನೆ ಅಂತೀರಾ ತೋರಿಸ್ತಿವಿ ನೋಡಿ.. ಅವಳಿ ನಗರಗಳ ನಡುವೆ ಬಿ.ಆರ್.ಟಿ.ಎಸ್ ಬಸ್ಸಿನ ಜೊತೆಗೆ ಲಘು ರೈಲು(Light rail along with BRTS buses) ಸಾರಿಗೆಯನ್ನು ಪರಿಚಯಿಸಲು ಸರ್ಕಾರ ಮುಂದಾಗಿದೆ. ಒಂದು ವೇಳೆ, ಈ ಯೋಜನೆಯು ಕಾರ್ಯರೂಪಕ್ಕೆ ಬಂದರೆ, ದೇಶದಲ್ಲೇ ಮೊದಲ ಬಾರಿಗೆ ಲಘು ರೈಲು ಸಾರಿಗೆಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರಗಳು ಪಡೆಯಲಿವೆ.
ಹೌದು.. ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ನಗರ ಸಾರಿಗೆ ಮೇಲೆ ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ಜನರಿಗೆ ಉತ್ತಮ ಸಾರಿಗೆ ಸಂಪರ್ಕವನ್ನು ಒದಗಿಸಲು ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹುಬ್ಬಳ್ಳಿ ಧಾರವಾಡ ರಸ್ತೆಯಲ್ಲಿ ಖಾಸಗಿ ವಾಹನಗಳ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರವು ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಲು ಹೆಚ್ಚು ಒತ್ತು ನೀಡುತ್ತಿದೆ.
ಇನ್ನೂ ನಾಲ್ಕು ವಾರಗಳಲ್ಲಿ ಪ್ರಸ್ತಾವನೆ ಸಿದ್ಧವಾಗಲಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ಪ್ರಸ್ತಾಪವಿದೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಒಂದೂವರೆ ವರ್ಷದಲ್ಲಿ ಈ ಯೋಜನೆ ಜಾರಿಯಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಮಾಹಿತಿ ನೀಡಿದ್ದಾರೆ.
‘ಇದು ಆರಂಭಿಕ ಹಂತದಲ್ಲಿದೆ. ನಾನು ಬಿಆರ್ಟಿಎಸ್ ಯೋಜನೆಗೆ ವಿರುದ್ಧವಾಗಿಲ್ಲ. ಲಘು ರೈಲು ಸಾರಿಗೆ ಜಾರಿಯಾದಾಗ ಬಿಆರ್ಟಿಎಸ್ ಅನ್ನು ನಿಲ್ಲಿಸಲಾಗುವುದಿಲ್ಲ. ಮುಂದಿನ 10 ವರ್ಷಗಳಲ್ಲಿ, ಹುಬ್ಬಳ್ಳಿ-ಧಾರವಾಡ ಮಹಾನಗರಗಳು ವೇಗವಾಗಿ ವಿಸ್ತಾರಗೊಳ್ಳಲಿವೆ. ಬೆಂಗಳೂರಿನ ನಂತರ ಜನರು ವಾಸ್ತವ್ಯಕ್ಕೆ ಮತ್ತು ಕೈಗಾರಿಕೆಗಳಿಗೆ ಇದು ಮುಂದಿನ ಆಯ್ಕೆಯಾಗಿದೆ. ಆದ್ದರಿಂದ ಮುಂದಿನ 10-20 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಅವಳಿ ನಗರಗಳನ್ನು ಅಭಿವೃದ್ಧಿಪಡಿಸಲು ಯೋಚಿಸಬೇಕು. ಅದಕ್ಕೆ ಅನುಗುಣವಾಗಿ ಯೋಜನೆ ರೂಪಿಸಬೇಕು’ ಎಂಬ ವರದಿ ಸಹ ನೀಡಲಾಗಿದೆ.