ಶಿರಸಿ: ವೀರ ಸಾವರ್ಕರ್ ಸೇರಿದಂತೆ ದೇಶಭಕ್ತರ ಪಾಠವನ್ನು ಪಠ್ಯದಿಂದ ಹೊರಹಾಕಿರುವುದು ಕಾಂಗ್ರೆಸ್ನ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್(Pramod Muthalik) ಹೇಳಿದರು. ನಗರದ ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದರು. ಸಾವರ್ಕರ್ ಒಬ್ಬ ಶ್ರೇಷ್ಠ ಹೋರಾಟಗಾರರಾಗಿದ್ದು, ಅಂಡಮಾನ್ ಜೈಲಿನಲ್ಲಿ 23 ವರ್ಷ ಇದ್ದರು. ಗಾಂಧೀಜಿ, ನೆಹರು ಅಥವಾ ಕಾಂಗ್ರೆಸ್ʼನ ಒಬ್ಬರೇ ಒಬ್ಬರು ಕೂಡ ಅಂಡಮಾನ್ ಜೈಲಿಗೆ ಹೋಗಿಲ್ಲ.
ಜೈಲು ಎಂದರೆ ಕಾಂಗ್ರೆಸಿಗರಿಗೆ ರೆಸಾರ್ಟ್ ಆಗಿತ್ತು. ಜೈಲಿನಲ್ಲಿ ಕಠಿಣ ಶಿಕ್ಷೆ ಅನುಭವಿಸಿದ ಸಾವರ್ಕರ್ ಬಗ್ಗೆ ಅವಹೇಳನಕಾರಿ, ಅಸಹ್ಯವಾಗಿ ಮಾತನಾಡುವುದನ್ನು ಬಿಟ್ಟು ನಾಲಿಗೆ ಬಿಗಿಹಿಡಿದು ಮಾತನಾಡಲಿ ಎಂದು ಎಚ್ಚರಿಸಿದರು. ಬಿಜೆಪಿ ಹಿಂದುತ್ವವನ್ನು ಕಡೆಗಣಿಸುತ್ತಿದೆ. ಕಾರ್ಯಕರ್ತರನ್ನು ಅಲಕ್ಷ್ಯ ಮಾಡುತ್ತಿದೆ. ತಮ್ಮ ಸ್ವಾರ್ಥ ಹಾಗೂ ಭ್ರಷ್ಟಾಚಾರ ತುಂಬಿ ತುಳುಕಿದ ವಾತಾವರಣ ಮತ್ತು ಹಿಂದುತ್ವ ಕಡೆಗಣಿಸಿದ ಪರಿಣಾಮದಿಂದ ಇವತ್ತು ದೊಡ್ಡ ಪ್ರಮಾಣದಲ್ಲಿ ಹಿಂದೂಗಳಿಗೆ ಮತ್ತು ಬಿಜೆಪಿ ಪ್ರಮುಖರಲ್ಲಿ ವ್ಯತ್ಯಾಸ ಉಂಟಾಗಿದೆ.
ಈ ವ್ಯತ್ಯಾಸ ಹೋಗಬೇಕಾದರೆ ತಮ್ಮ ತಪ್ಪನ್ನು ಒಪ್ಪಿಕೊಂಡು ಹಿಂದೂ ಸಂಘಟನೆಗಳಿಗೆ ಬಲ ತುಂಬುವ ಕೆಲಸ ಮಾಡಿದರೆ ಮಾತ್ರ ಮತ್ತೆ ಕರ್ನಾಟಕದಲ್ಲಿ ಬಿಜೆಪಿ ಏನಾದರೂ ಉಸಿರು ಬಿಡಬಹುದು. ಇಲ್ಲವಾದರೆ ಇನ್ನೂ ಧೂಳಿಪಟವಾಗಲಿದೆ ಎಂದರು. ನಮಗೆ ಮೋದಿ ಬೇಕು. ದೇಶದ ಸುರಕ್ಷತೆಯ ರಕ್ಷಣೆಗೋಸ್ಕರ ಮೋದಿ ಬೇಕು. ಇಡೀ ಕರ್ನಾಟಕದಲ್ಲಿ ಲೋಕಸಭೆಯ 28ಕ್ಕೆ 28 ಸ್ಥಾನ ಮೋದಿ ಕೈ ಬಲಪಡಿಸುವವರು ಬರಬೇಕು. ಈ ಸಂಬಂಧ ಶ್ರೀರಾಮ ಸೇನೆ ಸಂಘಟನೆ ಮೋದಿ ಗೆಲ್ಲಿಸಿ ದೇಶ ಉಳಿಸಿ ಎಂದು ದೊಡ್ಡ ಅಭಿಯಾನ ಕೈಗೊಳ್ಳುತ್ತಿದೆ ಎಂದರು.