ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ನಟ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಎನ್ ಕುಮಾರ್ ನಡುವಿನ ಆರೋಪ, ಪ್ರತ್ಯಾರೋಪ ಇಂದಿಗೂ ಮುಂದುವರೆದಿದೆ. ಪ್ರರಕಣದ ಕುರಿತು ಈಗಾಗಲೇ ನಟ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಮಧ್ಯೆ ಇದಕ್ಕೆಲ್ಲಾ ನೇರಾ ಕಾರಣ ಸ್ವತಃ ಸೂರಪ್ಪ ಬಾಬು ಎಂದು ಸುದೀಪ್ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಆರೋಪ ಮಾಡಿದ್ದಾರೆ.
ಸೂರಪ್ಪ ಬಾಬು ಅವರನ್ನು ಶಿಖಂಡಿ ಎಂದು ಸಂಭೋಧಿಸಿರುವ ಚಕ್ರವರ್ತಿ ಚಂದ್ರಚೂಡ್, ”ಹಲವು ಸಂಪಾದಕರಿಗೆ, ಪತ್ರಕರ್ತರಿಗೆ ಕರೆ ಮಾಡಿ ಹಣದ ಆಮಿಷ ನೀಡಿ ಸುದೀಪ್ ವಿರುದ್ಧ ಸುದ್ದಿ ಮಾಡುವಂತೆ ಸೂರಪ್ಪ ಬಾಬು ಒತ್ತಾಯ ಮಾಡಿದ್ದಾರೆ. ಅಲ್ಲದೆ ಕ್ಲಬ್ ಒಂದರಲ್ಲಿ ಸೂರಪ್ಪ ಬಾಬು ಹಾಗೂ ಎಂಎನ್ ಕುಮಾರ್ ಒಟ್ಟಿಗಿದ್ದಿದ್ದನ್ನು ಸ್ವತಃ ನಾನೇ ನೋಡಿದ್ದೇನೆ. ಸುದೀಪ್ ವಿರುದ್ಧ ತೆರೆಮರೆಯಲ್ಲಿ ಸೂರಪ್ಪ ಬಾಬು ಕೆಲಸ ಮಾಡುತ್ತಲೇ ಬಂದಿದ್ದರು. ಅವರಿಗೆ ಸುದೀಪ್ ಸಾಕಷ್ಟು ಸಹಾಯ ಮಾಡಿದ್ದರೂ ಸಹ ಸೂರಪ್ಪ ಬಾಬು, ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
”ಕೋಟಿಗೊಬ್ಬ 2′ ಸಿನಿಮಾದ ಸಂಭಾವನೆ 2.50 ಕೋಟಿ ರೂಪಾಯಿಗಳನ್ನು ಸುದೀಪ್ ಅವರಿಗೆ ಸೂರಪ್ಪ ಬಾಬು ಕೊಡಬೇಕು. ಅದಾದ ಬಳಿಕ ‘ಕೋಟಿಗೊಬ್ಬ 3’ ಸಿನಿಮಾ ಸಹ ಅವರದ್ದೇ ತಪ್ಪಿನಿಂದ ಒಂದು ದಿನ ತಡವಾಗಿ ಬಿಡುಗಡೆ ಆಯ್ತು. ಅಂದು ನಾನು ಸುದೀಪ್ ಅವರ ಜೊತೆಗೇ ಇದ್ದೆ. ಸುದೀಪ್ ಅವರು ಅಂದು ಜಾಕ್ ಮಂಜು ಹಾಗೂ ಸಲಾಂ ಅವರಿಗೆ ಏನು ಹೇಳಿದರು, ಹೈದರಾಬಾದ್ನ ನೆಗೆಟಿವ್ ಫೈನಾನ್ಶಿಯರ್ಗಳಿಗೆ ಏನು ಹೇಳಿ ಕೊನೆಗೆ ಸಿನಿಮಾ ಬಿಡುಗಡೆ ಮಾಡಿಸಿದರು ಎಂಬುದು ನಾನು ನೋಡಿದ್ದೇನೆ” ಎಂದಿದ್ದಾರೆ ಚಕ್ರವರ್ತಿ.
”ಸೂರಪ್ಪ ಬಾಬು, ಅವರ ಮಗಳ ಕೈಯಲ್ಲಿ ಸುದೀಪ್ಗೆ ಮನವಿಗಳನ್ನು ಮಾಡಿಸಿದರು. ಸುದೀಪ್ ಅವರು ಎರಡೆರಡು ಸಿನಿಮಾಗಳನ್ನು ಸೂರಪ್ಪ ಬಾಬುಗೆ ಮಾಡಿಕೊಟ್ಟರು. ಸ್ವತಃ ಸೂರಪ್ಪ ಬಾಬು ಅವರೇ ಸುದೀಪ್ ಮಾಡಿದ ಸಹಾಯವನ್ನು ವೇದಿಕೆಯಲ್ಲಿ ಮೆಚ್ಚಿ ಕೊಂಡಾಡಿದ್ದರು. ಸೂರಪ್ಪ ಬಾಬು ಅವರು ಜಾಕ್ ಮಂಜು ಅವರಿಗೆ ಒಂದೂವರೆ ಕೋಟಿ ರೂಪಾಯಿ ಹಣ ಕೊಡಬೇಕು, ಕೋಟಿಗೊಬ್ಬ 3 ಸಿನಿಮಾದ 3.5 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ‘ಕೋಟಿಗೊಬ್ಬ 2’ ಸಿನಿಮಾದ್ದು 2.5 ಕೋಟಿ ಬಾಕಿ ಉಳಿಸಿಕೊಂಡಿದ್ದೀರಿ. ಸುಮಾರು ಏಳು ಕೋಟಿ ಹಣ ಬ್ಯಾಲೆನ್ಸ್ ಉಳಿಸಿಕೊಂಡಿದ್ದೀರಿ” ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿದ್ದು ಆ ಯಾವುದೇ ಹಣಕ್ಕೆ ಚಂದ್ರಚೂಡ್ ದಾಖಲೆಗಳನ್ನು ತೋರಿಸಿಲ್ಲ.
”ಸೂರಪ್ಪ ಬಾಬು ಅವರು ಕಷ್ಟದಲ್ಲಿದ್ದಾಗೆಲ್ಲ ಸುದೀಪ್ ಕೈಹಿಡಿದಿದ್ದಾರೆ. ಅವರ ಮನೆಯ ಋಣದಲ್ಲಿ ಸೂರಪ್ಪ ಬಾಬು ಇದ್ದಾರೆ. ‘ಕೋಟಿಗೊಬ್ಬ’ ಟೈಟಲ್ಗೆ ಅನ್ವರ್ಥನಾಮ ಸುದೀಪ್ ಎಂದು ಅವರೇ ಹೇಳಿಕೊಂಡಿದ್ದಾರೆ. ಆದರೆ ಬೆನ್ನ ಹಿಂದೆ ಇಷ್ಟೋಂದು ಪಿತೂರಿಗಳನ್ನು ಮಾಡುತ್ತಿದ್ದೀರಿ. ನಿಮಗೆ ಎಲ್ಲ ವಿಧದಲ್ಲಿಯೂ ಸುದೀಪ್ ಸಹಾಯ ಮಾಡಿದ್ದರು ಹಾಗಿದ್ದರೂ ಏಕೆ ಅವರ ಬೆನ್ನ ಹಿಂದೆ ಪಿತೂರಿ ಮಾಡುವ ಕಾರ್ಯ ಮಾಡುತ್ತಿದ್ದೀರಿ” ಎಂದು ಪ್ರಶ್ನೆ ಮಾಡಿದ್ದಾರೆ.
ವಿಡಿಯೋದಲ್ಲಿ ಎಂಎನ್ ಕುಮಾರ್, ಸೂರಪ್ಪ ಬಾಬು, ಟೆಶಿ ವೆಂಕಟೇಶ್ ಇನ್ನೂ ಕೆಲವರ ವಿರದ್ಧವಾಗಿ ಚಕ್ರವರ್ತಿ ಚಂದ್ರಚೂಡ್ ಮಾತನಾಡಿದ್ದಾರೆ. ಅಲ್ಲದೆ, ಕೆಲವು ನಿರ್ಮಾಪಕರು, ಯಾವಾಗಲೋ ಅಡ್ವಾನ್ಸ್ ಕೊಟ್ಟು ಸಿನಿಮಾ ಪ್ರಾರಂಭ ಮಾಡದೆ, ಇನ್ಯಾವಗಲೋ ಅಡ್ವಾನ್ಸ್ ವಾಪಸ್ ಕೇಳುತ್ತಾರೆ ಅದಕ್ಕೆ ಬಡ್ಡಿ ಸೇರಿಸಿ ಕೊಡುವಂತೆ ಕೇಳುತ್ತಾರೆ ಎಂದು ಉದಾಹರಣೆಗಳನ್ನು ಚಕ್ರವರ್ತಿ ಚಂದ್ರಚೂಡ್ ನೀಡಿದ್ದಾರೆ.