ಬೆಂಗಳೂರು ;– ಬಿಜೆಪಿಯೊಂದಿಗೆ ಯಾವುದೇ ಕಾರಣಕ್ಕೂ ಜೆಡಿಎಸ್ ವಿಲೀನವಾಗುವುದಿಲ್ಲ ಎಂದು ಶಾಸಕ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಂಗಳವಾರ ಬಜೆಟ್ ಮೇಲಿನ ಚರ್ಚೆ ಸಮಯದಲ್ಲಿ ಬಿಜೆಪಿ ಸದಸ್ಯ ವೇದವ್ಯಾಸ್ ಕಾಮತ್ ಮಾತನಾಡುತ್ತಿದ್ದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಪದೇ ಪದೇ ಅಡ್ಡಿಪಡಿಸುತ್ತಿದ್ದುದನ್ನು ಕಂಡು ಎದ್ದು ನಿಂತ ರೇವಣ್ಣ, ಕಾಮತ್ ಪರವಾಗಿ ಮಾತನಾಡಿದರು. ಇದಕ್ಕೆ ಕಾಂಗ್ರೆಸ್ಸಿಗರು, ನೀವು ಬಿಜೆಪಿಯೊಂದಿಗೆ ವಿಲೀನವಾಗಿದ್ದೀರಿ ಎಂದು ಕಾಲೆಳೆದರು.
ಯಾವುದೇ ಪಕ್ಷದ ಜೊತೆ ಜೆಡಿಎಸ್ ವಿಲೀನವಿಲ್ಲ. ವಿಲೀನವಾಗಿ ಕೆಲವರು ವನವಾಸ ಅನುಭವಿಸುತ್ತಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂಪ್ರಸಾದ್ ಯಾದವ್ ಕಾಂಗ್ರೆಸ್ಗೆ ಬೆಂಬಲ ನೀಡಿದರೂ ಜೈಲುವಾಸ ಅನುಭವಿಸಬೇಕಾಯಿತು ಎಂದು ರೇವಣ್ಣ ವ್ಯಂಗ್ಯವಾಡಿದರು.