ನವದೆಹಲಿ: ಬಿಜೆಪಿ ವಿರೋಧಿ ಪಕ್ಷಗಳು ರಚಿಸಿರುವ ಹೊಸ ಮೈತ್ರಿಕೂಟಕ್ಕೆ ‘ಇಂಡಿಯಾ’ ಎಂಬ ಹೆಸರು ನೀಡಿರುವುದಕ್ಕೆ ತಾವು ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ. ಆ ಬಗ್ಗೆ ಬಂದಿರುವ ವರದಿಗಳು ಆಧಾರರಹಿತ ಎಂದು ಜೆಡಿಯು ವರಿಷ್ಠ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಸ್ಪಷ್ಟಪಡಿಸಿದ್ದಾರೆ. ”2024ರ ಚುನಾವಣೆಗಾಗಿ ನಾವು ಬಿಜೆಪಿಯೇತರ ಪಕ್ಷಗಳನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತಿದ್ದೇವೆ.
ಪಾಟ್ನಾದಲ್ಲಿ ನಡೆದ ಮೈತ್ರಿಕೂಟದ ಮೊದಲ ಸಭೆಗೆ(First meeting of alliance) 16 ಪಕ್ಷಗಳು ಹಾಜರಾಗಿದ್ದವು. ಬೆಂಗಳೂರಿನ ಸಭೆಗೆ 26 ಪಕ್ಷಗಳು ಒಟ್ಟುಗೂಡಿವೆ. ನಮ್ಮ ಸಂಖ್ಯೆ ಹೆಚ್ಚುತ್ತಿದೆ, ಪ್ರತಿಪಕ್ಷಗಳ ಒಗ್ಗಟ್ಟೂ ಸಹ ಬಲಗೊಳ್ಳುತ್ತಿದೆ. ಸಭೆ ಫಲಪ್ರದವಾಗಿದೆ. ಅಸಮಾಧಾನದ ಪ್ರಶ್ನೆಯೇ ಉದಯಿಸುವುದಿಲ್ಲ,” ಎಂದು ನಿತೀಶ್ ಹೇಳಿದ್ದಾರೆ
ಬೆಂಗಳೂರಿನ ಪ್ರತಿಪಕ್ಷಗಳ ಸಭೆಗೆ ಹಾಜರಾಗಿದ್ದ ನಿತೀಶ್, ಬಳಿಕ ನಡೆದ ಸುದ್ದಿಗೋಷ್ಠಿಗೆ ಗೈರಾಗಿದ್ದರು. ಅವರು ‘ಇಂಡಿಯಾ’ ಹೆಸರಿನ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ”ಮೈತ್ರಿಕೂಟದ ಮುಂದಾಳತ್ವ ನೀಡದ್ದಕ್ಕಾಗಿ ನಿತೀಶ್ ಬೇಸರಗೊಂಡಿದ್ದಾರೆ. ಹೀಗಾಗಿಯೇ ಅವರು ಸುದ್ದಿಗೋಷ್ಠಿ ಬಹಿಷ್ಕರಿಸಿ ಪಟನಾಗೆ ಹಿಂದಿರುಗಿದರು,” ಎಂದು ಬಿಹಾರ ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ಹೇಳಿದ್ದರು.