ಉತ್ತರಾಖಂಡ: ಜುಲೈ 15 ರಂದು ಉತ್ತರಾಖಂಡದ ಹಲ್ದ್ವಾನಿ ಪಟ್ಟಣದಲ್ಲಿ ಒಂದು ವಿಚಿತ್ರ ಪ್ರಕರಣ ಬಯಲಾಗಿತ್ತು. ಉದ್ಯಮಿಯೊಬ್ಬನ ಶವ ಕಾರ್ನಲ್ಲಿ ಕುಳಿತ ರೀತಿಯಲ್ಲಿ ಪತ್ತೆಯಾಗಿತ್ತು. ಕಾರಿನ ಎಂಜಿನ್ ಆನ್ ಇತ್ತು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ಉದ್ಯಮಿಯ ಕಾಲಿನಲ್ಲಿ ಹಾವು ಕಡಿದಿರುವ ಗುರುತು ಪತ್ತೆಯಾಗಿತ್ತು. ಹೀಗಾಗಿ, ಉದ್ಯಮಿ ಅಂಕಿತ್ ಚೌಹಾಣ್ ಹಾವು ಕಡಿತದಿಂದ ಸಾವನ್ನಪ್ಪಿದ್ದಾನೆ ಎಂದು ಮೇಲ್ನೋಟಕ್ಕೆ ಪೊಲೀಸರು ಭಾವಿಸಿದ್ದರು. ಆದರೆ, ಈ ಪ್ರಕರಣದ ತನಿಖೆ ನಡೆಸಿದ ಸಂದರ್ಭದಲ್ಲಿ ದೊಡ್ಡ ಷಡ್ಯಂತ್ರವೊಂದು ಬಯಲಾಯ್ತು!
ಸಿನಿಮೀಯ ರೀತಿಯಲ್ಲಿ ಹಾವನ್ನು ಬಳಸಿ ಕೊಲೆ!
30 ವರ್ಷ ವಯಸ್ಸಿನ ಉದ್ಯಮಿ ಅಂಕಿತ್ ಚೌಹಾಣ್ ಶವದ ಮರಣೋತ್ತರ ಪರೀಕ್ಷೆ ವೇಳೆ ಮೃತನ ಕಾಲಿಗೆ ಎರಡು ಬಾರಿ ಹಾವು ಕಡಿದಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಹಾವಿನ ವಿಷದಿಂದಲೇ ಉದ್ಯಮಿಯ ಹತ್ಯೆಯಾಗಿದೆ ಎಂದೂ ಮರಣೋತ್ತರ ಪರೀಕ್ಷೆಯಲ್ಲಿ ಮಾಹಿತಿ ಸಿಕ್ಕಿತ್ತು. ಆರಂಭದಲ್ಲಿ ಇದು ಆಕಸ್ಮಿಕ ಸಾವು ಎಂದು ಪೊಲೀಸರಿಗೆ ಮೇಲ್ನೋಟಕ್ಕೆ ಕಂಡು ಬಂತು. ಆದರೆ, ಮೃತ ಚೌಹಾಣ್ನ ಮೊಬೈಲ್ ಕರೆಗಳ ಮಾಹಿತಿ ತಪಾಸಣೆ ವೇಳೆ ಆತನಿಗೆ ಮಹಿ ಆರ್ಯಾ ಎಂಬ ಗರ್ಲ್ ಫ್ರೆಂಡ್ ಇದ್ದಳು ಎಂಬ ಮಾಹಿತಿ ಲಭ್ಯವಾಗಿತ್ತು. ತನ್ನ ಗೆಳತಿ ಜೊತೆ ಮೃತ ಅಂಕಿತ್ ಪ್ರತಿ ದಿನ ಸಾಕಷ್ಟು ಬಾರಿ ಮಾತುಕತೆ ನಡೆಸುತ್ತಿದ್ದ ಅನ್ನೋದು ತಿಳಿದು ಬಂತು.
ಇತ್ತ ಮೃತ ಅಂಕಿತ್ನ ಅಕ್ಕ ಇಶಾ ಕೂಡಾ ತನ್ನ ತಮ್ಮನ ಗೆಳತಿ ಆರ್ಯಾ ವಿರುದ್ಧವೇ ಆರೋಪ ಮಾಡುತ್ತಿದ್ದಳು. ಇಬ್ಬರೂ ವಿಪರೀತ ಜಗಳ ಆಡುತ್ತಿದ್ದರು ಎಂದು ಮಾಹಿತಿ ನೀಡಿದ್ದಳು. ಅಂಕಿತ್ನ ಸಾವಿನ ಬಳಿಕ ಆರ್ಯಾ ಕೂಡಾ ನಾಪತ್ತೆಯಾಗಿದ್ದಳು. ಇದರಿಂದ ಸಂಶಯಗೊಂಡ ಪೊಲೀಸರು ಆಕೆಯ ಮೊಬೈಲ್ ಕರೆಗಳ ವಿವರವನ್ನೂ ತಪಾಸಣೆ ನಡೆಸಿದರು. ಈ ವೇಳೆ ಆಕೆಯ ಮೊಬೈಲ್ ಕರೆಯ ವಿವರಗಳಲ್ಲಿ ಹಾವಾಡಿಗನೊಬ್ಬನ ಜೊತೆ ಸಂಪರ್ಕದಲ್ಲಿರೋದು ಪತ್ತೆಯಾಯ್ತು. ಹಾವಾಡಿಗನ ಮೊಬೈಲ್ ಚಾಲನೆಯಲ್ಲಿತ್ತು. ಆತ ಉತ್ತರ ಪ್ರದೇಶ ಮೂಲದವನು ಎಂದು ಅರಿತ ಪೊಲೀಸರು ಆತನನ್ನು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದರು. ಆಗ ಇಡೀ ಪ್ರಕರಣದ ನಿಜ ಬಣ್ಣ ಬಯಲಾಯ್ತು.
ಅಂಕಿತ್ ಕೊಲೆಗೆ ಕಾರಣವೇನು?
ಮೃತ ಅಂಕಿತ್ನ ಗರ್ಲ್ ಫ್ರೆಂಡ್ ಆಗಿದ್ದ ಆರ್ಯಾಗೆ ದೀಪ್ ಎಂಬ ಮತ್ತೊಬ್ಬ ಗೆಳೆಯನೂ ಇದ್ದ. ಈ ವಿಚಾರ ತಿಳಿದಿದ್ದ ಅಂಕಿತ್, ಕುಡಿತದ ಚಟಕ್ಕೆ ಒಳಗಾಗಿದ್ದ. ಕುಡಿದ ಅಮಲಿನಲ್ಲಿ ಆರ್ಯಾ ಮನೆಗೆ ಬಂದು ಆಕೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದ ಎಂದು ತಿಳಿದು ಬಂದಿದೆ. ಹೀಗಾಗಿ, ಆಕೆ ತನ್ನ ಗೆಳೆಯ ದೀಪ್ ಹಾಗೂ ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಹಾಯಕರ ನೆರವನ್ನು ಪಡೆದು ಹಾವಾಡಿಗನೊಬ್ಬನನ್ನು ಸಂಪರ್ಕಿಸಿದರು.
ಹಾವಾಡಿಗನಿಗೆ ವಿಷ ಸರ್ಪ ತರಲು ಹೇಳಿ ಅಂಕಿತ್ ಚೌಹಾಣ್ ಮೇಲೆ ಬಿಟ್ಟು ಹಾವು ಕಡಿಯುವಂತೆ ಮಾಡಿದ್ದರು. ಅಂಕಿತ್ ಚೌಹಾಣ್ ಮೃತಪಟ್ಟ ಬಳಿಕ ಆತನ ಶವವನ್ನು ಕಾರ್ನಲ್ಲಿ ಬಿಟ್ಟು ಹೋಗಿದ್ದರು ಅನ್ನೋ ಮಾಹಿತಿಯನ್ನ ಪೊಲೀಸರಿಗೆ ಸೆರೆ ಸಿಕ್ಕಿರುವ ಹಾವಾಡಿಗ ನೀಡಿದ್ಧಾನೆ. ಇದೀಗ ಆರೋಪಿ ಆರ್ಯಾ, ಆಕೆಯ ಗೆಳೆಯ ದೀಪ್ ಹಾಗೂ ಇಬ್ಬರು ಸಹಾಯಕರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಹಚ್ಚಿ ಸೆರೆ ಹಿಡಿಯಲು ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.