ಮಂಡ್ಯ :- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಬುಧವಾರ ಚಾಲನೆ ದೊರೆತಿದ್ದು, ಮದ್ದೂರು ತಾಲೂಕಿನ ವಿವಿಧ ಬಾಪೂಜಿ ಸೇವಾ ಕೇಂದ್ರಗಳಿಗೆ ತಾ.ಪಂ ಆಡಳಿತಾಧಿಕಾರಿ ಧನರಾಜ್ ಬೋರಾಳೆ ಭೇಟಿ ನೀಡಿ ಪರಿಶೀಲನೆ ನಡೆಸಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿದರು.
ಮದ್ದೂರು ತಾಲೂಕಿನ ಗೆಜ್ಜಲಗೆರೆ, ಹೆಮ್ಮನಹಳ್ಳಿ, ನಿಡಘಟ್ಟ, ಸೋಮನಹಳ್ಳಿ ಗ್ರಾಮ ಪಂಚಾಯಿತಿಗಳ ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು.
ಸೇವಾ ಕೇಂದ್ರಗಳಿಗೆ ಆಗಮಿಸುವ ಫಲಾನುಭವಿಗಳಿಗೆ ಕುಡಿಯುವ ನೀರು, ಶೌಚಾಲಯ, ಆಸನದ ವ್ಯವಸ್ಥೆ, ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಪಿಡಿಓ ಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯನ್ನು ಎಪಿಎಲ್ – ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವ ಮನೆ ಯಜಮಾನಿ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಅರ್ಹ ಫಲಾನುಭವಿಗಳಿಗೆ ಆಗಸ್ಟ್ ತಿಂಗಳಿನಿಂದಲೇ ಮಾಸಿಕ 2 ಸಾವಿರ ರೂ. ಹಣವನ್ನು ನೇರವಾಗಿ ಮನೆ ಯಜಮಾನಿಯ ಖಾತೆಗೆ ಜಮೆಯಾಗಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶವಿಲ್ಲ, ಸರ್ಕಾರ ನಿಗದಿಪಡಿಸಿರುವ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು. ಸರ್ಕಾರ ನಿಯೋಜಿಸಿರುವ ಪ್ರಜಾಪ್ರತಿನಿಧಿಗಳ ಬಳಿಯೇ ನೋಂದಣಿ ಮಾಡಿಕೊಳ್ಳಬಹುದಾಗಿದ್ದು, ಯಾವುದೇ ಶುಲ್ಕವನ್ನು ನೀಡಬಾರದು ಎಂದರು.
ಗೃಹಲಕ್ಷ್ಮಿ ಯೋಜನೆಗೆ ಪಡಿತರ ಚೀಟಿಯಲ್ಲಿ ಗುರುತಿಸಲಾಗಿರುವ ಮನೆ ಯಜಮಾನಿಗೆ ಅವರು ನೀಡಿರುವ ಮೊಬೈಲ್ ಸಂಖ್ಯೆಯಾಧರಿಸಿ ನೋಂದಣಿ ಮಾಡಬೇಕಾದ ದಿನಾಂಕ ಸಮಯ ಹಾಗೂ ನೋಂದಣಿ ಮಾಡಿಸುವ ವಿವರಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ತಿಳಿಸಲಾಗುತ್ತದೆ. ಅದೇ ಸಮಯದಲ್ಲಿ ಸೂಚಿಸಿದ ಸ್ಥಳಕ್ಕೆ ಗ್ರಾಮೀಣ ಭಾಗದವರು ನಿಗದಿತ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ನಗರ ಪ್ರದೇಶದವರು ಕರ್ನಾಟಕ ಒನ್ ಕೇಂದ್ರಗಳಲ್ಲಿ ನೋಂದಣಿ ಮಾಡಬಹುದಾಗಿದೆ.
ಒಂದು ವೇಳೆ ಸಂದೇಶ ಬರದಿದ್ದರೆ ಅಂತಹವರು 1602 ಸಂಖ್ಯೆಗೆ ಕರೆ ಮಾಡಿ ಅಥವಾ 8147500500 ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು ಎಸ್ಎಂಎಸ್ ವಾಟ್ಸಾಪ್ ಸಂದೇಶ ಕಳುಹಿಸುವ ಮೂಲಕ ನೋಂದಣಿ ಮಾಡಬೇಕಾದ
ವಿವರಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಇದೇ ವೇಳೆ ತಾ.ಪಂ ಇಓ ಎಲ್.ಸಂದೀಪ್, ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ್, ಪಿಡಿಓ ಸತೀಶ್ ಹಾಗೂ ಸಿಬ್ಬಂದಿಗಳು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ