ದೆಹಲಿ: ಎರಡು ವರ್ಷಗಳ ಜೈಲು ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ಅರ್ಜಿದಾರ ಪೂರ್ಣೇಶ್ ಈಶ್ವರಭಾಯಿ ಮತ್ತು ಗುಜರಾತ್ ಸರ್ಕಾರಕ್ಕೆ (Gujarat government) ನೋಟಿಸ್ ನೀಡಿದೆ.
ಇಂದು ಪ್ರಕರಣ ವಿಚಾರಣೆ ನಡೆಸಿದ ನ್ಯಾ.ಬಿ.ಆರ್ ಗವಾಯಿ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ಪೀಠ ಪ್ರತಿವಾದಿಗಳ ವಾದ ಆಲಿಸದೇ ಶಿಕ್ಷೆಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ, ಮುಂದಿನ ವಿಚಾರಣೆ ಅಗಸ್ಟ್ 4 ರಂದು ನಡೆಯಲಿದೆ ಎಂದು ತಿಳಿಸಿತು
ಗಾಂಧಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಮಧ್ಯಂತರ ತಡೆಯಾಜ್ಞೆಗೆ ಒತ್ತಾಯಿಸಿದರು. ಅರ್ಜಿದಾರರು 111 ದಿನಗಳಿಂದ ಸಂಕಷ್ಟದಲ್ಲಿದ್ದಾರೆ. ಅವರು ಈಗಾಗಲೇ ಒಂದು ಅಧಿವೇಶನ ಕಳೆದುಕೊಂಡಿದ್ದಾರೆ. ಸದ್ಯ ನಡೆಯುತ್ತಿರುವ ಅಧಿವೇಶನಕ್ಕೆ ಹಾಜರಾಗಿಲ್ಲ. ವಯನಾಡಿನ ಸಂಸತ್ ಕ್ಷೇತ್ರಕ್ಕೆ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಧ್ಯಂತರ ತಡೆ ನೀಡಬಹುದು ಎಂದು ಮನವಿ ಮಾಡಿದರು.
ಸಿಂಘ್ವಿ ವಾದ ಆಲಿಸಿದ ನ್ಯಾಯಾಲಯವು ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿತು, ಪ್ರತಿವಾದಿಗಳ ವಾದವನ್ನು ಸಹ ಕೇಳಬೇಕಾಗುತ್ತದೆ ಎಂದು ತಿಳಿಸಿತು
ಮಾನಹಾನಿ ಪ್ರಕರಣದಲ್ಲಿ (Defamation Case) ಗುಜರಾತ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತಮಗೆ ವಿಧಿಸಿರುವ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ತಡೆಯಲು ಗುಜರಾತ್ ಹೈಕೋರ್ಟ್ ನಿರಾಕರಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ವಯನಾಡ್ ಸಂಸದ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.