ಬಾಲಿವುಡ್ನ ಸದ್ಯದ ಲೇಟೆಸ್ಟ್ ಜೋಡಿ ಅಂದರೆ ಅದು ವಿಜಯ್ ವರ್ಮಾ ಹಾಗೂ ನಟಿ ತಮನ್ನಾ ಭಾಟಿಯಾ. ಇಬ್ಬರು ತಮ್ಮ ಪ್ರೀತಿಯನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದು ಇಬ್ಬರು ಯಾವಾಗ ಮದುವೆಯಾಗುತ್ತಾರೆ ಎಂಬ ಪ್ರಶ್ನೆ ಶುರುವಾಗಿದೆ. ಹೋದಲ್ಲಿ ಬಂದಲ್ಲೆಲ್ಲಾ ವಿಜಯ್ ಹಾಗೂ ತಮನ್ನಾ ಮದುವೆಯ ಕುರಿತು ಪ್ರಶ್ನೆ ಮಾಡಲಾಗುತ್ತಿದ್ದು ಇದೀಗ ವಿಜಯ್ ಮದುವೆಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚಿಗೆ ಸಂದರ್ಶನವೊಂದರಲ್ಲಿ ವಿಜಯ್ ವರ್ಮಾ ಅವರನ್ನು ಮದುವೆಯಾಗುವಂತೆ ಅವರ ಕುಟುಂಬ ಸದಸ್ಯರು ಒತ್ತಡ ಹೇರುತ್ತಾರೆಯೇ ಎಂದು ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ವಿಜಯ್ ನೀಡಿದ ಉತ್ತರ ಕೇಳಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.
ನಾನು ಮಾರ್ವಾಡಿ ಕುಟುಂಬದವ.. ನಮ್ಮ ಸಮುದಾಯದಲ್ಲಿ, ಗಂಡು ಮಕ್ಕಳ ಮದುವೆಯ ವಯಸ್ಸು 16 ವರ್ಷ. ಹಾಗಾಗಿ ನನ್ನೊಂದಿಗೆ ಎಲ್ಲವೂ ಬಹಳ ಹಿಂದೆಯೇ ಪ್ರಾರಂಭವಾಗಿತ್ತು. ನಾನು ಮದುವೆಯ ವಯಸ್ಸನ್ನು ಮೀರಿತ್ತು. ಬಳಿಕ ನಾನು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟೆ. ನಾನು ಈ ಪ್ರಶ್ನೆಗಳ ಬಗ್ಗೆ ಎಂದಿಗೂ ಯೋಚಿಸಲಿಲ್ಲ ಮತ್ತು ನನ್ನ ವೃತ್ತಿಜೀವನದ ಬಗ್ಗೆ ಮಾತ್ರ ಗಮನಹರಿಸಿದೆ. ಆದರೆ ಈಗಲೂ ನನ್ನ ತಾಯಿ ನನ್ನ ಮದುವೆಗೆ ಒತ್ತಾಯಿಸುತ್ತಾರೆ. ಅವರು ಪ್ರತಿ ಫೋನ್ ಕರೆಯಲ್ಲಿ ಮದುವೆಯ ಬಗ್ಗೆ ಕೇಳುತ್ತಾರೆ, ಆದರೆ ನಾನು ಅದಕ್ಕೆ ಉತ್ತರ ಕೊಡದೇ ತಪ್ಪಿಸಿಕೊಳ್ಳುತ್ತಿದ್ದೇನೆ. ನಾನು ನನ್ನ ಜೀವನದಲ್ಲಿನ್ನೂ ಬೆಳೆಯುತ್ತಿದ್ದೇನೆ, ಸದ್ಯ ನಾನು ನನ್ನ ಕೆರಿಯರ್ ಕಡೆ ಗಮನ ಕೊಡುತ್ತೇನೆ ಎಂದಿದ್ದಾರೆ.
‘ಲಸ್ಟ್ ಸ್ಟೋರಿಸ್ 2’ ಚಿತ್ರೀಕರಣದಲ್ಲಿ ಸಂದರ್ಭದಲ್ಲಿ ವಿಜಯ್-ತಮನ್ನಾ ನಡುವೆ ಪ್ರೀತಿ ಹುಟ್ಟಿಕೊಂಡಿದೆ. ಕಳೆದ 2 ವರ್ಷದಿಂದ ಇಬ್ಬರು ಡೇಟ್ ಮಾಡ್ತಿದ್ದಾರೆ.