ಬೆಂಗಳೂರು: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ಈಗಾಗಲೇ ಹಲವು ದಾಖಲೆಗಳನ್ನು ಬರೆದಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ವೆಸ್ಟ್ ಇಂಡೀಸ್ ವಿರುದ್ದ ಪ್ರಸ್ತುತ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ 2000 ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಹಾಗೂ ಟೆಸ್ಟ್ ಇತಿಹಾಸದಲ್ಲಿಯೇ ಆರಂಭಿಕನಾಗಿ ಅತಿ ಹೆಚ್ಚು ಸರಾಸರಿ ಹೊಂದಿರುವ ಭಾರತೀಯ ಬ್ಯಾಟ್ಸ್ಮನ್ ಆಗಿದ್ದಾರೆ.
ಇಲ್ಲಿನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ, 143 ಎಸೆತಗಳಲ್ಲಿ 80 ರನ್ ಸಿಡಿಸಿದರು. 45 ರನ್ ಗಳಿಸುತ್ತಿದ್ದಂತೆ ರೋಹಿತ್ ಶರ್ಮಾ 2000 ರನ್ಗಳನ್ನು ಪೂರ್ಣಗೊಳಿಸಿದರು. ಒಟ್ಟಾರೆ ಆರಂಭಿಕನಾಗಿ 40 ಇನಿಂಗ್ಸ್ಗಳಲ್ಲಿ ರೋಹಿತ್ 2052 ರನ್ ಗಳಿಸಿದ್ದಾರೆ.
ಹಾಗೆ ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತೊಂದು ದಾಖಲೆ ಬರೆದಿದ್ದಾರೆ. 2000 ರನ್ ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳಿಸಿದ ಭಾರತೀಯ ಆರಂಭಿಕರಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿರುವ ಆರಂಭಿಕ ಆಟಗಾರ ಎಂಬ ಸಾಧನೆಯನ್ನು ರೋಹಿತ್ ಶರ್ಮಾ ಮಾಡಿದ್ದಾರೆ. ಸದ್ಯ ಆರಂಭಿಕನಾಗಿ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಸರಾಸರಿ 53.55ರಷ್ಟು ಇದೆ.