ಬೆಂಗಳೂರು : NDAನೂ ಇಲ್ಲ, INDIA(UPA)ನೂ ಇಲ್ಲ..! ಸ್ವತಂತ್ರವಾಗಿ ಹೋರಾಟ ಮಾಡ್ತೇವೆ ಎನ್ನುವ ಮೂಲಕ ಎಲ್ಲಾ ಗೊಂದಲಗಳಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತೆರೆ ಎಳೆದರು.
ಆದರೆ, ಸದ್ಯ ಈ ಎಲ್ಲ ಚರ್ಚೆಗಳಿಗೂ ಬ್ರೇಕ್ ಬಿದ್ದಿದ್ದು, ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಹಿಂದೇಟು ಹಾಕಿದೆ. ಈ ಮೂಲಕ NDAನೂ ಇಲ್ಲ, INDIAನೂ ಇಲ್ಲ, ಸ್ವತಂತ್ರವಾಗಿಯೇ ಹೋರಾಟ ಮಾಡುವ ನಿರ್ಧಾರಕ್ಕೆ ದಳಪತಿಗಳು ಬಂದಿದ್ದಾರೆ.
ಪ್ರಾದೇಶಿಕ ಪಕ್ಷ ಜೆಡಿಎಸ್ ಪರಿಸ್ಥಿತಿ ಹೇಳಿಕೊಳ್ಳುವಂತೆ ಇಲ್ಲ. ಚುನಾವಣೆಯಿಂದ ಚುನಾವಣೆಗೆ ಅದರ ಪ್ರಾಬಲ್ಯ ಕುಸಿಯುತ್ತಿದ್ದರೆ, ಬಿಜೆಪಿಯ ಶಕ್ತಿ ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ಎಂಬಂತಾಗಿದ್ದು, ಹಾವು-ಏಣಿ ಆಟ ಆಡುತ್ತಲೇ ಇದೆ. ಇದುವರೆಗೂ ಒಂದು ಬಾರಿಯೂ ಬಹುಮತವನ್ನು ಪಡೆಯಲಾಗಿಲ್ಲ. ಆದರೆ, ಕಾಂಗ್ರೆಸ್ ಶಕ್ತಿ ಕರ್ನಾಟಕದಲ್ಲಿ ಹೆಚ್ಚುತ್ತಿದ್ದು, ಜಂಟಿಯಾಗಿಯೇ ಕಾಂಗ್ರೆಸ್ ಅನ್ನು ಎದುರಿಸಲು ಬಿಜೆಪಿ – ಜೆಡಿಎಸ್ ಮುಂದಾಗಿದ್ದವು.
ಬಿಜೆಪಿ – ಜೆಡಿಎಸ್ ಮೈತ್ರಿ ಮಾತುಕತೆಗೆ ಬ್ರೇಕ್ ಬಿದ್ದಿದ್ದು ಏಕೆ? ಬಿಜೆಪಿ ಜೊತೆ ಹೋಗಲು ಜೆಡಿಎಸ್ ಹಿಂದೇಟು ಹಾಕುತ್ತಿರುವುದು ಏಕೆ ಎಂಬುದರ ವಿವರ ಇಲ್ಲಿದೆ.
1.ಬಿಜೆಪಿ ಜೊತೆಗೆ ಹೋಗಲು ಮನಸ್ಸು ಮಾಡ್ತಿಲ್ಲ. ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ವಿರೋಧಿ ಬಣದಲ್ಲಿಯೇ ಹೆಚ್ಚಾಗಿ ಗುರುತಿಸಿಕೊಂಡಿರುವ ದೇವೇಗೌಡರು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ.
- ಎಚ್ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ವಿರುದ್ಧ ಸೋಲು ಅನುಭವಿಸಿದರು. ಈ ಕ್ಷೇತ್ರಗಳಲ್ಲೆಲ್ಲಾ ಮೈತ್ರಿ ಒಳ ಏಟು ನೀಡಿದ್ದು, ಬಿಜೆಪಿ ಗೆಲ್ಲಲು ಸಹಾಯವಾಗಿತ್ತು. ಆಗಿನಂತೆ ಈಗ ಬಿಜೆಪಿ ಜೊತೆ ಸೇರಿ ಕಾಂಗ್ರೆಸ್ ಗೆಲುವಿಗೆ ಸಹಾಯ ಮಾಡಿದಂತಾಗುತ್ತದೆ ಎಂಬ ಆತಂಕ ಇದ್ದು, ಮೈತ್ರಿಗೆ ಹಿಂದೇಟು ಹಾಕುತ್ತಿದ್ದಾರೆ.
- ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಭಾಗಶಃ ಮುಸ್ಲಿಂ ಮತಗಳು ಕಾಂಗ್ರೆಸ್ ಕಡೆ ವಾಲಿದ್ದು, ಉಳಿದಿರುವ ಮತಗಳನ್ನಾದರೂ ಉಳಿಸಿಕೊಳ್ಳೋಣ ಎಂಬ ಇರಾದೆಯಲ್ಲಿ ಜೆಡಿಎಸ್ ನಾಯಕರು ಇದ್ದಂಗೆ ಇದೆ.
- 2006ರಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು. ಆದರೆ, 2008ರಲ್ಲಿ ಅಧಿಕಾರ ಹಂಚಿಕೆಯಾಗದ ಹಿನ್ನೆಲೆ ಮೈತ್ರಿ ಸರ್ಕಾರ ಪತನವಾಗಿ ಚುನಾವಣೆ ನಡೆಯಿತು. ಬಳಿಕ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅಧಿಕಾರ ನಡೆಸಿತು. 2018ರಲ್ಲಿ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಆಯ್ತು. ಆದರೆ, ಬಳಿಕ ಎರಡು ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದವು. ಇದಾದ ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 19 ಸ್ಥಾನಗಳನ್ನು ಮಾತ್ರ ಜೆಡಿಎಸ್ ಗೆಲ್ಲುವಲ್ಲಿ ಸಫಲವಾಗಿದೆ.
- 2004 ರಿಂದಲೂ ಜೆಡಿಎಸ್ ವಿವಿಧ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದೆ. 2008 ಮತ್ತು 2013ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಗೆ ಅವಕಾಶ ಇಲ್ಲದ ಕಾರಣ ಜೆಡಿಎಸ್ ಕಿಂಗ್ ಮೇಕರ್ ಆಗಿದ್ದಿಲ್ಲ. 2004ರಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು, ಬಳಿಕ 2006ರಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಆಯ್ತು. 2004ರಲ್ಲಿ 58 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್, ಮೈತ್ರಿ ಸರ್ಕಾರದ ಪತನದ ಬಳಿಕ ನಡೆದ 2008ರ ವಿಧಾನಸಭಾ ಚುನಾವಣೆಯಲ್ಲಿ 28 ಸ್ಥಾನಕ್ಕೆ ಇಳಿಯಿತು. 2013ರಲ್ಲಿ ಮೈತ್ರಿ ಇರದ ಕಾರಣ 40 ಸ್ಥಾನಕ್ಕೆ ಏರಿತು. ಆದರೆ, 2018ರಲ್ಲಿ 37 ಸ್ಥಾನಗಳಿಗೆ ಜೆಡಿಎಸ್ ಇಳಿಯಿತು.
- ರಾಜ್ಯದ ಹಿತದೃಷ್ಟಿಯಿಂದ ಪ್ರಾದೇಶಿಕ ಪಕ್ಷ ಉಳಿಯಬೇಕು. ಜನರಿಗೆ ಆಗುತ್ತಿರುವ ಅನ್ಯಾಯವನ್ನು ಎತ್ತಿ ಹಿಡಿದು ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ. ಎನ್ಡಿಎ ಅಥವಾ ಐಎನ್ಡಿಐಎ ಸೇರುವ ಪ್ರಶ್ನೆಯೇ ಇಲ್ಲ ಎಂದು ಎಚ್ಡಿ ದೇವೇಗೌಡ ಅವರು ತಿಳಿಸಿದರು.