ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿಚಾರದಲ್ಲಿ, ಮಂತ್ರಿಗಳ ವಿಚಾರದಲ್ಲಿ ವೈಯಕ್ತಿಕವಾಗಿ ಫೇಕ್ ಸುದ್ದಿಗಳ ಹೆಚ್ಚಾಗುತ್ತಿವೆ. ಇವುಗಳನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತೇವೆ. ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್(Dr. G. Parameshwar) ಹೇಳಿದ್ರು. ಇನ್ನು ‘ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತಿದೆ’ ಎಂಬ ಹರಿಪ್ರಸಾದ್ ಹೇಳಿಕೆಗೆ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಬಿ.ಕೆ.ಹರಿಪ್ರಸಾದ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಈ ವಿಚಾರದಲ್ಲಿ ನನಗೆ ಏನೂ ಗೊತ್ತಿಲ್ಲ. ಮುಖ್ಯಮಂತ್ರಿಗಳು ಸಮರ್ಥರಿದ್ದಾರೆ, ಅವರೇ ಉತ್ತರಿಸುತ್ತಾರೆ ಎಂದರು.
ಇನ್ನು ಪಿಎಸ್ಐ ಅಕ್ರಮ ನ್ಯಾಯಾಂಗ ತನಿಖೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ನಿನ್ನೆ ಆದೇಶ ಮಾಡಿದ್ದೇವೆ. ನ್ಯಾಯಾಧೀಶ ವೀರಪ್ಪ ಅವರನ್ನು ನೇಮಕ ಮಾಡಲಾಗಿದ್ದು ಏಕ ಸದಸ್ಯತ್ವದಲ್ಲಿ ತನಿಖೆ ಆಗಲಿದೆ. ನ್ಯಾಯಾಂಗ ತನಿಖೆ ಆಗಬೇಕು ಎಂದು ಹಿಂದೆ ನಾವೇ ಹೇಳಿದ್ದೆವು. ಸತ್ಯಾಸತ್ಯತೆಗಳನ್ನು ಹೊರಗೆ ತರಬೇಕು ಎಂದು ಕೊಟ್ಟಿದ್ದೇವೆ. ತನಿಖೆ ಬೇರೆ ಮಾಡುತ್ತೆವೆ, ನೇಮಕಾತಿಯ ಪ್ರಕ್ರಿಯೆ ಬೇರೆ ಮಾಡುತ್ತೇವೆ. ಅದಕ್ಕೂ ಇದಕ್ಕೂ ಟ್ಯಾಲಿ ಮಾಡಲು ಹೋಗಲ್ಲ. ಅದನ್ನು ಟೈಅಪ್ ಮಾಡಿಕೊಂಡರೆ ನೇಮಕಾತಿ ಮಾಡಲು ಆಗಲ್ಲ. ಇನ್ನೊಂದು ನೇಮಕಾತಿ ಆಗಬೇಕು. 400 ಹುದ್ದೆಗಳು ಖಾಲಿ ಇವೆ. ಅವುಗಳನ್ನು ನೇಮಕ ಮಾಡಬೇಕೆಂದರೂ ಈ ಕೇಸ್ ಇತ್ಯರ್ಥ ಆಗಬೇಕು ಎಂದರು.