ನವದೆಹಲಿ ;- 2018ರಿಂದ ಇಲ್ಲಿಯ ತನಕ ಕೇಂದ್ರ ಸರ್ಕಾರ ಬರೋಬ್ಬರಿ 3,064 ಕೋಟಿ ರೂ. ಹಣವನ್ನು ಜಾಹೀರಾತು ಹಾಗೂ ಪ್ರಚಾರಕ್ಕಾಗಿ ಖರ್ಚು ಮಾಡಿದೆ. ಇದರಲ್ಲಿ ಪ್ರಮುಖವಾಗಿ ಮುದ್ರಣ ಮಾಧ್ಯಮಗಳು ಅತಿಹೆಚ್ಚು ಜಾಹೀರಾತು ಪಡೆದಿದ್ದು ಹಾಗೂ ನಂತರದ ಸ್ಥಾನದಲ್ಲಿ ಟಿವಿ ಮಾಧ್ಯಮಗಳು ಸ್ಥಾನ ಪಡೆದಿವೆ. ಹಾಗಾದರೆ ಈ ಮಾಹಿತಿಯನ್ನ ನೀಡಿದ್ದು ಯಾರು? ಯಾವ ಯಾವ ಮಾಧ್ಯಮಗಳಿಗೆ ಎಷ್ಟು ಜಾಹೀರಾತು ನೀಡಲಾಗಿದೆ? ಅದರ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.
ಹೌದು, ಕಳೆದ ವಾರ ರಾಜ್ಯಸಭೆಯಲ್ಲಿ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ಒದಗಿಸಿದ ಅಂಕಿ ಅಂಶಗಳ ಪ್ರಕಾರ ಸರ್ಕಾರ 2018-19 ಮತ್ತು 2023-24ರ ನಡುವೆ ಒಟ್ಟಾರೆ ಮುದ್ರಣ ಮಾಧ್ಯಮಗಳಿಗೆ 1,338 ಕೋಟಿ ರೂಪಾಯಿ, ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ 1,273 ಕೋಟಿ ರೂಪಾಯಿ ಹಾಗೂ ಹೊರಾಂಗಣ ಪ್ರಚಾರಕ್ಕಾಗಿ 452 ಕೋಟಿ ರೂಪಾಯಿ ಖರ್ಚು ಮಾಡಿದೆ. ಈ ಮೂಲಕ ಮೊದಲ ಸ್ಥಾನದಲ್ಲಿ ಮುದ್ರಣ ಮಾಧ್ಯಮಗಳು ಸ್ಥಾನ ಪಡೆದಿವೆ. ಇನ್ನೂ ಈ ಜಾಹೀರಾತು ನೀಡುವ ಪ್ರಮಾಣ ಇತ್ತೀಚೆಗೆ ಒಂದಷ್ಟು ಕಡಿಮೆ ಆಗಿದೆ. ಒಟ್ಟಾರೆ ವೆಚ್ಚವು 2018-19ರಲ್ಲಿ 1,179 ಕೋಟಿ ರೂಪಾಯಿಯಿಂದ 2022-23ರಲ್ಲಿ 408 ಕೋಟಿ ರೂ.ಗೆ ಇಳಿಕೆ ಕಂಡಿದೆ.
ಹಾಗೇ 2019-20ರಲ್ಲಿ ಕೇಂದ್ರ ಸರ್ಕಾರದ ಜಾಹೀರಾತು ವೆಚ್ಚ 708.18 ಕೋಟಿ ರೂಪಾಯಿಗೆ ಕುಸಿದಿತ್ತು. ಇದು 2020-21ರಲ್ಲಿ 409 ಕೋಟಿಗೆ ಮತ್ತು 2021-22ರಲ್ಲಿ ರೂ 315.98 ಕೋಟಿಗೆ ಕುಸಿದಿತ್ತು. ಆದರೆ ಇದೀಗ ಅಂದರೆ 2022-23ರಲ್ಲಿ ಮತ್ತೆ ಏರಿಕೆ ಕಂಡಿದ್ದು, ಈ ವರ್ಷದ ಏಪ್ರಿಲ್ ಮತ್ತು ಜುಲೈ 13 ನಡುವೆ ಕೇಂದ್ರ ಸರ್ಕಾರವು ಜಾಹೀರಾತಿಗಾಗಿ 43.16 ಕೋಟಿ ರೂ. ಖರ್ಚು ಮಾಡಿದೆ ಅಂತಿದೆ ಅಂಕಿ-ಅಂಶ. ಈ ಪ್ರಕಾರ ಮುದ್ರಣ ಮಾಧ್ಯಮದಲ್ಲಿ 2018-19 ಮತ್ತು 2019-20ರಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳು ಹೆಚ್ಚಿನ ಪಾಲನ್ನು ಹೊಂದಿದೆ. ಹೀಗೆ ಕೇಂದ್ರ ಸರ್ಕಾರ ಜಾಹೀರಾತು ಹಾಗೂ ಪ್ರಚಾರಕ್ಕೆ ಸಾಕಷ್ಟು ಖರ್ಚು ಮಾಡಿದೆ.
ಒಟ್ನಲ್ಲಿ ಕಳೆದ ಲೋಕಸಭೆ ಚುನಾವಣೆ ಬಳಿಕ ಕೇಂದ್ರ ಸರ್ಕಾರದ ಜಾಹೀರಾತು ಹಾಗೂ ಪ್ರಚಾರ ವೆಚ್ಚ ಇಳಿಕೆ ಕಾಣುತ್ತಾ ಬಂದಿದೆ.