ನವದೆಹಲಿ ;- 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಓಟವನ್ನು ನಿಯಂತ್ರಿಸಬಹುದು ಎಂಬ ನಿರ್ಧಾರಕ್ಕೆ ಬಂದಿರುವ ವಿಪಕ್ಷಗಳು ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿವೆ. ಪಟನಾದಲ್ಲಿ ನಡೆದ ಸಬೆಗೆ 16 ಪಕ್ಷಗಳು ಹಾಜರಿ ಹಾಕಿದ್ದರೆ ಬೆಂಗಳೂರಿನಲ್ಲಿ ನಡೆದ ಸಭೆಗೆ 26 ಪಕ್ಷಗಳ ಧುರೀಣರು ಭಾಗವಹಿಸಿದ್ದರು. ಹೆಸರೂ ಲಾಭದಾಯಕ ಎನ್ನುವುದನ್ನು ಮನಗಂಡ ಈ ಪಕ್ಷಗಳು ತಮ್ಮ ಒಕ್ಕೂಟಕ್ಕೆ “ಐ.ಎನ್.ಡಿ.ಐ.ಎ” (ಇಂಡಿಯಾ)ಎದೂ ನಾಮಕರಣ ಮಾಡಿವೆ. ಮುಂದಿನ ಸಭೆ ಮುಂಬಯಿಯಲ್ಲಿ ನಡೆಯಲಿದ್ದು, 11 ಮಂದಿಯ ಸಂಚಾಲನಾ ಸಮಿತಿಯ ರಚನೆ ಆಗಲಿದೆ.
ಐ.ಎನ್.ಡಿ.ಐ.ಎ ಎಂಬ ಹೆಸರಿನಲ್ಲಿ ಎಲ್ಲವೂ ಅಡಗಿದೆ. ಎನ್ ಡಿಎ ಎದುರಿಸಲು ಈ ಹೆಸರು ಸೂಕ್ತ ಎನ್ನುವುದು ಈ ಪಕ್ಷಗಳ ಭಾವನೆ. ಇಂಡಿಯಾ ಹೆಸರಿನ ಜತೆಗೆ ಜೀತೆಗಾ ಭಾರತ್’ ಎಂಬ ಟ್ಯಾಗ್ ಲೈನ್ ಬಳಸಿಕೊಳ್ಳಲಿದೆ. ಭಾವನಾತ್ಮಕ ವಿಷಯಗಳನ್ನು ಒಟ್ಟೊಟ್ಟಿಗೆ ಬಿಜೆಪಿ ಇತ್ತಿಚಿನ ವರ್ಷಗಳಲ್ಲಿ ಅಭಿವೃದ್ದಿಯ ವಿಚಾರವನ್ನೂ ಪ್ರಸ್ತಾಪಿಸುತ್ತಾ ಬಂದಿದೆ. ದೇಶ, ದೇಶಾಭಿಮಾನ ಕೇವಲ ಬಿಜೆಪಿಯ ಸ್ವತ್ತಲ್ಲ, ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಸೇರಿದ್ದು ಎನ್ನುವ ಸಂದೇಶವನ್ನು ರವಾನೆ ಮಾಡುವ ತಂತ್ರವೂ ಇದರಲ್ಲಿ ಅಡಗಿದೆ. ವಿಪಕ್ಷಗಳ ಮೈತ್ರಿ ಕೂಟವೂ ಇಂಡಿಯಾ ಮತ್ತು ಭಾರತವನ್ನು ಪ್ರತಿನಿಧಿಸುತ್ತದೆ. ಈ ಒಕ್ಕೂಟದಲ್ಲಿ ಯಾವುದೇ ಒಬ್ಬ ವ್ಯಕ್ತಿ ಅಥವಾ ಒಂದು ಪಕ್ಷ ಮುಖ್ಯ ಅಲ್ಲ, ಎಲ್ಲ ಪಕ್ಷಗಳ ಪಾಲ್ಗೊಳ್ಳುವಿಕೆ ಮುಖ್ಯ ಎಂಬ ಸಂದೇಶವನ್ನು ಸಾರುವುದು ಒಕ್ಕೂಟದ ಉದ್ದೇಶ. ಇಡೀ ಪಕ್ಷ ಮತ್ತು ಸರಕಾರ ನರೇಂದ್ರ ಮೋದಿ ಕೇಂದ್ರೀಕೃತವಾಗಿರುವುದನ್ನು ಕೌಂಟರ್ ಮಾಡಲು ಈ ತಂತ್ರ ಹೆಣೆದಿದೆ.
ಇಂಡಿಯಾ ಎಂದು ಹೆಸರಿಟ್ಟುಕೊಂಡ ಮಾತ್ರಕ್ಕೆ ಎಲ್ಲವೂ ಸುಲಭ ಎಂದರ್ಥವಲ್ಲ. ಹಿಂದೆ 1971ರಲ್ಲಿ ‘ಇಂದಿರಾ ಹಠಾವೋ’ ಎಂದು ಜನತಾ ಪರಿವಾರ ಮತ್ತು ಇತರ ಕಾಂಗ್ರೆಸ್ಸೇತರ ಪಕ್ಷಗಳು ಚಳವಳಿ ಆರಂಭಿಸಿದಾಗ ಇಂದಿರಾ ಗಾಂಧಿ ‘ಗರೀಬಿ ಹಠಾವೋ’ ಎಂಬ ಪರ್ಯಾಯ ಘೋಷಣೆ ಮಾಡುವ ಮೂಲಕ ಬಡವರಿಗಾಗಿ ಯೋಜನೆಯೊಂದನ್ನು ಜಾರಿಗೊಳಿಸಿದರು. ಈ ಮೂಲಕ ವಿಪಕ್ಷಗಳ ತಂತ್ರವನ್ನು ಕಟ್ಟಿ ಹಾಕಿದ್ದ ಇತಿಹಾಸ ಕಣ್ಣ ಮುಂದಿದೆ.
ಇಂಡಿಯಾ ಒಕ್ಕೂಟದಲ್ಲಿ ಅಡ್ಡಿ ಆತಂಕಗಳು ಇಲ್ಲ ಎಂದೇನೂ ಇಲ್ಲ. ಪಟನಾದಲ್ಲಿ ನಡದ ಸಭೆಯಲ್ಲಿ ಭಾಗವಹಿಸಿದ್ದ ಎನ್ ಸಿ ಪಿ ಮುಖಂಡ ಶರದ್ ಪವಾರ್ ಬೆಂಗಳೂರಿನ ಸಭೆಗೆ ಗೈರು ಹಾಜರಾಗಿದ್ದರು. ತಮ್ಮ ಪಕ್ಷ ವಿಭಜನೆಯ ನಂತರ ಅವರು ಅಧೀರರಾಗಿದ್ದಾರೆ. ಕರ್ನಾಟಕದ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿತ್ತಾ ಬಂದಿರುವ ಜೆಡಿಎಸ್ ಇತ್ತೀಚೆಗೆ ಎನ್ ಡಿಎ ಮೈತ್ರಿಕೂಟದ ಕಡೆ ವಾಲುತ್ತಿರುವ ಸ್ಪಷ್ಟ ನಿದರ್ಶನಗಳು ಗೋಚರಿಸುತ್ತಿವೆ. ಜೆಡಿಎಸ್ ವರಿಷ್ಠ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ನಾಯಕತ್ವ ವಹಿಸಿದ್ದಾರೆಯೇ ಎನ್ನುವಷ್ಟು ಗುಮಾನಿ ಹುಟ್ಟಿಸುವ ರೀತಿಯಲ್ಲಿ ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅಲ್ಲದೆ ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ಮತ್ತು ಜಗನ್ ಮೋಹನ್ ರೆಡ್ಡಿ ಅವರೂ ವಿಪಕ್ಷಗಳ ಸಭೆಯಲ್ಲಿ ಭಾಗವಹಿಸಿಲ್ಲ. ಅವರ ಚಿತ್ತ ಯಾರತ್ತ ಎನ್ನುವುದು ಇನ್ನೂ ನಿಗೂಢ ರಹಸ್ಯವಾಗಿಯೇ ಉಳಿದಿದೆ.
ವಿಪಕ್ಷಗಳ ಸಾಲಿನಲ್ಲಿ ಸೀಟು ಹೊಂದಾಣಿಕೆ ಬಿಗಡಾಯಿಸುವ ಸಾಧ್ಯತೆಗಳಿವೆ. ಆಡಳಿತಾರೂಢ ಬಿಜೆಪಿ ವಲಯದಲ್ಲೂ ಇಲ್ಲ ಎನ್ನುವಂತಿಲ್ಲ ಆದರೆ ಈ ಸಮಸ್ಯೆ ಪ್ರಮುಖವಾಗಿ ಕಾಡುವುದು ಇಂಡಿಯಾ ಗುಂಪಿಗೆ ಮಾತ್ರ. ಉದಾಹರಣೆಗೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮೇಲುಗೈ ಮತ್ತು ಮುಖ್ಯಮಂತ್ರಿಯೂ ಹೌದು. ಅಲ್ಲಿ ಅವರು ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ಎಷ್ಟು ಸ್ಥಾನಗಳನ್ನು ಬಿಟ್ಟುಕೊಡುತ್ತಾರೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಒಂದೇ ರಾಜ್ಯದ ಎರಡು ಮೂರು ಪಕ್ಷಗಳು ವಿಪಕ್ಷಗಳ ಮೈತ್ರಿಕೂಟದಲ್ಲಿದ್ದು, ಆ ಪಕ್ಷಗಳ ನಡುವೆ ಸ್ಥಾನ ಹೊಂದಾಣಿಕೆ ಸುಲಭ ಅಲ್ಲ. ಆದರೂ ಮೈತ್ರಿಗೆ ಭಂಗ ತರದೆ ಶೇ.80ರಷ್ಟು ಕ್ಷೇತ್ರಗಳಲ್ಲಿ ಮೈತ್ರಿಕೂಟದ ಏಕೈಕ ಅಭ್ಯರ್ಥಿಯನ್ನು ನಿಲ್ಲಿಸುವುದು ಮೊದಲ ಆದ್ಯತೆಯಾಗಿದೆ.
ಕೇವಲ ಚುನಾವಣೆ ಎದುರಿಸುವುದು, ಮಣಿಪುರ ಹಿಂಸಾಚಾರ ಖಂಡನೆ ಮತ್ತು ವಿಪಕ್ಷಗಳ ಮುಖಂಡರ ಮೇಲಿನ ಐಟಿ ಇಡಿ ದಾಳಿ ಎದುರಿಸಲು ಇಂಡಿಯಾ ಸೀಮಿತಗೊಳ್ಳಬಾರದು. ಜ್ವಲಂತ ಸಮಸ್ಯೆಗಳಿಗೆ ಹೋರಾಟ ನಡೆಸುವುದು, ತಮ್ಮೊಳಗೆ ಇರುವ ವಂಶಾಡಳಿತ ರಾಜಕಾರಣಕ್ಕೆ ಕಡಿವಾಣ ಹಾಕುವುದು ಆದ್ಯತೆಯಾಗಬೇಕು. ಪಟನಾದಿಂದ ಬೆಂಗಳೂರು ತಲುಪುವ ವೇಳೆಗೆ ಈ ಒಕ್ಕೂಟ ಸಾಕಷ್ಟು ಪ್ರಬಲವಾಗಿದ್ದು, ಮುಂಬಯಿ ತಲುಪುವ ಹೊತ್ತಿಗೆ ಮತ್ತಷ್ಟು ಶಕ್ತಿ ತುಂಬಿಕೊಳ್ಳಬಹುದು. ಕೇವಲ ದೇಶದ ಹೆಸರಿನಲ್ಲಿ ಒಗ್ಗೂಡಿದ ಮಾತ್ರಕ್ಕೆ ದುರ್ಬಲ ವಿಪಕ್ಷ ಕೂಟ ಪ್ರಬಲ ಆಗಲಾರದು. ಬದಲಾಗಿ ಹೋರಾಟದ ಮೂಲಕ ಪ್ರಾಬಲ್ಯ ಸಾಧಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕು ಎನ್ನುವ ಸಲಹೆ ರಾಜಕೀಯ ವಿಶ್ಲೇಷಕರದ್ದು.