ಭೋಪಾಲ್: ಯಾವುದೇ ನಗರ ಅಥವಾ ಹಳ್ಳಿಗಳಿಗೆ ಹೋದರೂ ರಸ್ತೆಗಳ ಮಧ್ಯೆ ಸಾಕು ಪ್ರಾಣಿಗಳ ದಂಡು ನಿಂತಿರುವುದು ಕಾಣಿಸುತ್ತದೆ. ಅದರಲ್ಲಿಯೂ ಜಾನುವಾರುಗಳ ‘ಸಂಚಾರ ನಿಯಂತ್ರಣ’ ಗಡಿಯನ್ನು ದಾಟಿ ಹೋಗುವುದು ದೊಡ್ಡ ಸಾಹಸವೇ ಸರಿ. ಇನ್ನು ಜಾನುವಾರುಗಳು ಅಡ್ಡ ಬಂದ ಕಾರಣಕ್ಕೆ ಒಂದಲ್ಲ ಒಂದು ಕಡೆ ಪ್ರತಿ ನಿತ್ಯ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅದಕ್ಕೆ ಕಡಿವಾಣ ಹಾಕುವುದು ಸುಲಭವಲ್ಲ.
ಎಲ್ಲೆಂದರಲ್ಲಿ ಜಾನುವಾರುಗಳನ್ನು ಓಡಾಡಲು ಬಿಡುವವರಿಗೆ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ವಿಶಿಷ್ಟ ಶಿಕ್ಷೆಯ ನಿಯಮವನ್ನು ಜಾರಿಗೆ ತರಲಾಗಿದೆ. ಈ ಹಳ್ಳಿಯಲ್ಲಿ ಜಾನುವಾರುಗಳನ್ನು ಕೊಟ್ಟಿಗೆ ಅಥವಾ ಹೊಲದಲ್ಲಿ ಮೇಯಲು ಬಿಡದೆ, ಎಲ್ಲೆಂದರಲ್ಲಿ ಅಲೆದು ಮೇಯಲು ಬಿಡುವವರಿಗೆ 500 ರೂ ದಂಡ ವಿಧಿಸುವುದಾಗಿ ಗ್ರಾಮದ ಮುಖ್ಯಸ್ಥರು ಘೋಷಿಸಿದ್ದಾರೆ.
ಅಷ್ಟೇ ಅಲ್ಲ, ಈ ತಪ್ಪು ಮಾಡಿದವರಿಗೆ ಐದು ಬಾರಿ ಚಪ್ಪಲಿಯಿಂದ ಬಾರಿಸಲಾಗುವುದು ಎಂದೂ ಹೇಳಿದ್ದಾರೆ. ದಂಡ ಕಟ್ಟಲು ಕೆಲವರು ಸಿದ್ಧರಿರಬಹುದು. ಆದರೆ ಚಪ್ಪಲಿಯೇಟಿನ ಅವಮಾನವನ್ನು ಸಹಿಸಲಾರರು. ಹೀಗಾಗಿ ಜನರು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬಹುದು ಎನ್ನುವುದು ಗ್ರಾಮದ ಸರ್ಪಂಚ್ ಅವರ ಉದ್ದೇಶ ಇರಬಹುದು. ಮಧ್ಯಪ್ರದೇಶದ ಶಾಹ್ದೋಲ್ ಜಿಲ್ಲೆಯ ನಗ್ನಡುಯಿ ಎಂಬ ಗ್ರಾಮದಲ್ಲಿ ಸರ್ಪಂಚ್ನ ಕಚೇರಿಯ ತಂಡವು ಮನೆಯಿಂದ ಮನೆಗೆ ತೆರಳಿ ಹೊಸ ನಿಯಮದ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದಾರೆ.
ಗ್ರಾಮಸ್ಥರ ಗಮನ ಸೆಳೆಯಲು ತಮಟೆ ಬಾರಿಸುತ್ತಾ ಊರಿನ ತುಂಬಾ ಈ ಪ್ರಕಟಣೆಯನ್ನು ಮಾಡುವುದು ವಿಡಿಯೋದಲ್ಲಿ ಕಾಣಿಸಿದೆ. ಹಳ್ಳಿಯ ಎಲ್ಲಾದರೂ ನಿಮ್ಮ ಜಾನುವಾರು ಮುಕ್ತವಾಗಿ ಅಡ್ಡಾಡುತ್ತಿರುವುದು ಕಂಡುಬಂದರೆ ನಿಮಗೆ ಐದು ಬಾರಿ ಚಪ್ಪಲಿಯಿಂದ ಹೊಡೆಯಲಾಗುವುದು ಮತ್ತು 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ಸರ್ಪಂಚ್ನ ಸಿಬ್ಬಂದಿ ಘೋಷಣೆ ಮಾಡಿದ್ದಾರೆ.