ಬೆಂಗಳೂರು : ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಖಾಸಗಿ ಬಸ್, ಆಟೋ, ಟ್ಯಾಕ್ಸಿ ಸಂಘಟನೆಗಳು ಬಂದ್ ಗೆ ಕರೆನೀಡಿದ ಬೆನ್ನಲ್ಲೇ ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದೆ.
ಈಗಾಗಲೇ ಜುಲೈ27 ರಂದು ಆಟೋ ಟ್ಯಾಕ್ಸಿ, ಖಾಸಗಿ ಬಸ್ ಮಾಲೀಕರು ರಾಜ್ಯಾದ್ಯಂತ ಬೃಹತ್ ಪ್ರಮಾಣದಲ್ಲಿ ಮುಷ್ಕರ ಕೈಗೊಳ್ಳಲು ನಿರ್ಧರಿಸಿದ್ದಾರೆ. ಒಂದು ವೇಳೆ ಮುಷ್ಕರ ಹಮ್ಮಿಕೊಂಡಲ್ಲಿ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆ ಆಗಲಿದೆ. ಇದನ್ನರಿತ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಇಂದು ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಮತ್ತು ಖಾಸಗಿ ಬಸ್ ಮಾಲೀಕರ ಜತೆ ಸಭೆ ಮಾಡಲು ತೀರ್ಮಾನಿಸಿದ್ದಾರೆ. ಬೆಂಗಳೂರಿನ ಸಾರಿಗೆ ಇಲಾಖೆ ಕೇಂದ್ರ ಕಚೇರಿ ಶಾಂತಿನಗರದಲ್ಲಿ ಸಭೆ ಮಾಡುತ್ತಿದ್ದು, ಮುಷ್ಕರ ಕರೆಕೊಟ್ಟ ಮಾಲೀಕರಿಗೆ ಆಹ್ವಾನ ನೀಡಲಾಗಿದೆ.
ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆಗೆ ಅಪಾರ ನಷ್ಟ ಉಂಟಾಗಿದೆ, ಇದರಿಂದಾಗಿ ಸರ್ಕಾರದ ಮುಂದೆ ಹಲವು ಬೇಡಿಕೆ ಇಟ್ಟಿರುವ ಖಾಸಗಿ ಸಂಘಟನೆಗಳು ಇದೇ ಜು. 27ರಂದು ಖಾಸಗಿ ಬಸ್, ಆಟೋ, ಟ್ಯಾಕ್ಸಿ ಸಂಘಗಳು ಬಂದ್ಗೆ ಕರೆ ನೀಡಿದ್ದವು.
ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಜೊತೆ ಖಾಸಗಿ ಸಾರಿಗೆ ಸಂಘ ಸಂಸ್ಥೆಗಳು ತಮ್ಮ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಸಭೆ ನಡೆಯಲಿದ್ದು ಸಭೆಯ ಬಳಿಗೆ ಬಂದ್ ಕುರಿತು ಸ್ಪಷ್ಟನೆ ಸಿಗಲಿದೆ.