ಕೊಲಂಬೊ: ಬಾಂಗ್ಲಾದೇಶ ಮಹಿಳಾ ತಂಡದ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಹರ್ಮನ್ಪ್ರೀತ್ ಕೌರ್ ಎಲ್ಬಿಡಬ್ಲ್ಯೂ ವಿವಾದದ ಬೆನ್ನಲ್ಲೇ ಎಮರ್ಜಿಂಗ್ ಏಷ್ಯಾಕಪ್ ಟೂರ್ನಿಯಲ್ಲಿ ನೋಬಾಲ್ ವಿವಾದದ (Noball Controversy) ಅಲೆ ಎದ್ದಿದೆ. ಭಾರತ ಎ ತಂಡದ ಸೋಲಿನ ಬಳಿಕ ನೋಬಾಲ್ ವಿವಾದ ಸೃಷ್ಟಿಯಾಗಿದ್ದು, ಪಾಕ್ ಮೋಸದಾಟವಾಡಿತಾ? ಅಂಪೈರ್ಗಳು ಕಂಡೂ ಕಾಣದಂತೆ ವರ್ತಿಸಿದ್ರಾ? ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಕೊಲಂಬೊದಲ್ಲಿ ಭಾನುವಾರ ನಡೆದ ಅಂಡರ್ 23 ಏಷ್ಯಾಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಭಾರತ (India A Team)-ಪಾಕ್ ನೀಡಿದ ಬೃಹತ್ ಮೊತ್ತದ ಗುರಿ ಬೆನ್ನತ್ತಿತ್ತು. ಬ್ಯಾಟಿಂಗ್ ಫಾರ್ಮ್ನಲ್ಲಿದ್ದ ಚೆನ್ನೈ ಮೂಲದ ಆಟಗಾರ ಸಾಯಿ ಸುದರ್ಶನ್ ಉತ್ತಮ ರನ್ ಕಲೆಹಾಕುವ ವಿಶ್ವಾಸದಲ್ಲಿದ್ದರು. ಆದ್ರೆ 9ನೇ ಓವರ್ನಲ್ಲಿ ಪಾಕ್ ವೇಗಿ ಅರ್ಷದ್ ಇಕ್ಬಾಲ್ ಬೌಲಿಂಗ್ಗೆ ಕ್ಯಾಚ್ ನೀಡಿ ಔಟಾದರು
ಇಕ್ಬಾಲ್ 9ನೇ ಓವರ್ನ 3ನೇ ಬಾಲ್ ಎಸೆಯುವಾಗ ಅವರ ಎಡಗಾಲು ಸಂಪೂರ್ಣ ಕ್ರೀಸ್ನಿಂದ ಹೊರಕ್ಕೆ ಬಂದಿದೆ. ಆದ್ರೆ ಅಂಪೈರ್ ಇದನ್ನು ಗಮನಿಸದೇ ಔಟ್ ತೀರ್ಪು ನೀಡಿದ್ದಾರೆ. ಇದು ಭಾರತದ ಸೋಲಿಗೆ ಕಾರಣವಾಯಿತು ಅನ್ನೋ ಟೀಂ ಇಂಡಿಯಾ ಅಭಿಮಾನಿಗಳ ವಾದಗಿದೆ. ಪಾಕಿಸ್ತಾನ ಕೊನೆಗೂ ತನ್ನ ಬುದ್ಧಿ ತೋರಿಸಿದೆ, ಭಾರತದ ವಿರುದ್ಧ ಮೋಸದಾಟವಾಡಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿದೆ ಎಂದು ಟೀಂ ಇಂಡಿಯಾ ಅಭಿಮಾನಿಗಳು ಕಿಡಿ ಕಾರಿದ್ದಾರೆ̤
ನೋಬಾಲ್ ವಿವಾದಗಳು ಇದೇ ಮೊದಲೇನಲ್ಲ:
ಕಳೆದ ವರ್ಷ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ರಿಷಭ್ ಪಂತ್ ನಾಯಕತ್ವದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಇದೇ ರೀತಿ ನೋಬಾಲ್ ವಿವಾದ ನಡೆದಿತ್ತು. ಆ ನಂತರ ನಡೆದ ಟಿ20 ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಪೀಲ್ ಮಾಡಿದ ನಂತರ ಅಂಪೈರ್ ನೋಬಾಲ್ ನೀಡಿದ್ದು, ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಈ ವರ್ಷ ನಡೆದ ಮಹಿಳಾ ಪ್ರೀಮಿಯರ್ ಲೀಗ್ನಲ್ಲೂ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ನೋಬಾಲ್ ಆಗಿದ್ದರೂ ಶಫಾಲಿ ವರ್ಮಾ ಅವರದ್ದು ಔಟ್ ಎಂದು ತೀರ್ಪು ನೀಡಲಾಗಿತ್ತು. ಆದ್ರೆ ಈ ಬಾರಿ ಎಮರ್ಜಿಂಗ್ ಏಷ್ಯಾಕಪ್ ಟೂರ್ನಿಯಲ್ಲಿ ಪಂದ್ಯದ ವೇಳೆ ಯಾವುದೇ ತೀರ್ಪು ನೀಡದಿರುದು ಅಂಪೈರ್ಗಳ ವೈಫಲ್ಯತೆಯನ್ನು ಎತ್ತಿ ತೋರಿಸಿದೆ.
ಕೊಲಂಬೊದಲ್ಲಿ ನಡೆದ ಅಂಡರ್ 23 ಏಷ್ಯಾಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ 8 ವಿಕೆಟ್ ನಷ್ಟಕ್ಕೆ 50 ಓವರ್ಗಳಲ್ಲಿ 352 ರನ್ ಕಲೆಹಾಕಿತ್ತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಪಾಕಿಸ್ತಾನ 40 ಓವರ್ಗಳಲ್ಲಿ 224 ರನ್ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.