ಶಿರಸಿ ;- ಸರ್ಕಾರದ ಆಡಳಿತ ಗೊಂದಲದ ಗೂಡಾಗಿದೆ. ಸ್ಪಷ್ಟತೆ, ಪಾರದರ್ಶಕತೆ ಇಲ್ಲ. ಬೆಲೆ ಏರಿಕೆ ಒಂದೆಡೆಯಾದರೆ, ಅಭಿವೃದ್ಧಿ ಶೂನ್ಯ. ಅವರ ಗ್ಯಾರಂಟಿಗಳೇ ಗೊಂದಲಮಯವಾಗಿವೆ. ಉಳಿದ ಮಂತ್ರಿಗಳು ತಮ್ಮ ಇಲಾಖೆಯ ಕಾರ್ಯವಿಧಾನವನ್ನು ಸಹ ಇದುವರೆಗೆ ತಿಳಿದುಕೊಂಡಿಲ್ಲ. ಚುನಾವಣೆ ಪೂರ್ವ ಹೇಳಿದಂತೆ ಯಾವ ಯೋಜನೆಯೂ ಸಮರ್ಪಕವಾಗಿ ಅನುಷ್ಠಾನ ಆಗಿಲ್ಲ. 200 ಯುನಿಟ್ ಫ್ರೀ ವಿದ್ಯುತ್ ಎಂಬ ಭರವಸೆ ಅವರದ್ದಾಗಿತ್ತಾದರೂ, ವಿದ್ಯುತ್ ದರವನ್ನು ಎರಡು ಪಟ್ಟು ಏರಿಕೆ ಮಾಡಿದ್ದಾರೆ. ವಿದ್ಯುತ್ ಬಿಲ್ ನಿರೀಕ್ಷೆಗೂ ಮೀರಿ ಬರುತ್ತಿದೆ. ಇದರಿಂದಾಗಿ ಸಣ್ಣ ಕೈಗಾರಿಕೆ ನಡೆಸುವುದು ಕಷ್ಟವಾಗಿದೆ ಎಂದು ಹೇಳಿದರು.
ಉಚಿತ ಬಸ್ ಆರಂಭಿಸುವ ಮುನ್ನ ಸೂಕ್ತ ಸಿದ್ಧತೆಯನ್ನು ಸರ್ಕಾರ ಮಾಡಿಕೊಂಡಿಲ್ಲ. ಹೆಚ್ಚುವರಿ ಚಾಲಕ-ನಿರ್ವಾಹಕರನ್ನು ಸಂಸ್ಥೆಗೆ ನೀಡಿಲ್ಲ. ಖಾಸಗಿ ವಾಹನ ಪರಿಸ್ಥಿತಿ ಏನು ಎಂದು ಅರಿಯದೇ ಯೋಜನೆ ಜಾರಿಗೆ ತಂದಿದ್ದಾರೆ. ಆಟೋ, ಬಾಡಿಗೆ ವಾಹನಕ್ಕೆ ಸಮಸ್ಯೆ ಆಗಿದೆ. ಇನ್ನೊಂದೆಡೆ ಗೃಹ ಲಕ್ಷ್ಮೀ ಸರ್ವರ್ ಸರಿ ಇಲ್ಲ. ಕಾಂಗ್ರೆಸ್ ಈಗ ಅಧಿಕಾರಿಗಳ ವರ್ಗಾವಣೆಯಲ್ಲಿ ಬ್ಯೂಸಿ ಆಗಿದೆ. ಆರಂಭದಲ್ಲಿಯೇ ಈ ರೀತಿ ಭ್ರಷ್ಟಾಚಾರ ಆರಂಭ ಆಗಿರುವುದು ಆತಂಕಕಾರಿಯಾಗಿದೆ ಎಂದರು.
ಕಿಸಾನ ಸಮ್ಮಾನ ಯೋಜನೆ ವಾಪಸ್ ಪಡೆದು ರೈತರ ಹೊಟ್ಟೆಯ ಮೇಲೆ ಏಕೆ ಹೊಡೆಯುತ್ತೀರಿ? ವಿದ್ಯಾನಿಧಿ ಏಕೆ ಸ್ಥಗಿತಗೊಳಿಸಬೇಕಿತ್ತು? ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಜಾರಿಗೆ ತರುವಲ್ಲಿಯೂ ರಾಜ್ಯ ಸರ್ಕಾರ ವಿಳಂಬ ಮಾಡಿದ್ದು, ಬೆಳೆಹಾನಿಯಾದ ರೈತರಿಗೆ ಯಾವುದೇ ಪರಿಹಾರ ಇಲ್ಲದಂತಾಗಿದೆ ಎಂದು ವಿಷಾಧಿಸಿದರು.