ಇಸ್ಲಾಮಾಬಾದ್: ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಗೆಳೆಯನನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಿದ್ದ ಭಾರತದ ಇಬ್ಬರು ಮಕ್ಕಳ ತಾಯಿ ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಬಳಿಕ ತನ್ನ ಪಾಕಿಸ್ತಾನಿ ಸ್ನೇಹಿತನನ್ನು ವಿವಾಹವಾಗಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
34 ವರ್ಷದ ಅಂಜು ತನ್ನ ಪಾಕಿಸ್ತಾನಿ ಸ್ನೇಹಿತನಾದ 29 ವರ್ಷದ ನಸ್ರುಲ್ಲಾ ಎಂಬಾತನನ್ನು ಭೇಟಿ ಮಾಡುವ ಸಲುವಾಗಿ ಕಾನೂನು ಬದ್ದವಾಗಿ ಪಾಕಿಸ್ತಾನಕ್ಕೆ ತೆರಳಿದ್ದು, ಆತನ ಮನೆಯಲ್ಲಿಯೇ ತಂಗಿದ್ದಳು. 2019ರಲ್ಲಿ ಫೇಸ್ಬುಕ್ನಲ್ಲಿ ಪರಿಚಯವಾದ ಅಂಜು ಹಾಗೂ ನಸ್ರುಲ್ಲಾ ಸ್ನೇಹಿತರಾಗಿದ್ದು, ಮಂಗಳವಾರ ಪಾಕ್ ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸ್ಥಳೀಯ ನ್ಯಾಯಾಲಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ಅಂಜು, ನಸ್ರುಲ್ಲಾ ಹಾಗೂ ಆತನ ಕುಟುಂಬಸ್ಥರು ಪೊಲೀಸ್ ಸಿಬ್ಬಂದಿ ಮತ್ತು ವಕೀಲರ ಸಮ್ಮುಖದಲ್ಲಿ ದಿರ್ ಬಾಲಾದಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದು, ಮಲಕಂಡ್ ವಿಭಾಗದ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ನಾಸಿರ್ ಮೆಹಮೂದ್ ಸತ್ತಿ, ಅಂಜು ಮತ್ತು ನಸ್ರುಲ್ಲಾ ಅವರ ಮದುವೆಯನ್ನು ದೃಢಪಡಿಸಿದ್ದಾರೆ. ಇಸ್ಲಾಂಗೆ ಮತಾಂತರಗೊಂಡ ಅಂಜುಗೆ ಫಾತಿಮಾ ಎಂದು ಹೆಸರಿಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಪೊಲೀಸ್ ಭದ್ರತೆಯಲ್ಲಿ ಭಾರತೀಯ ಮಹಿಳೆ ಅಂಜುವನ್ನು ನ್ಯಾಯಾಲಯದಿಂದ ಮನೆಗೆ ಕರೆದೊಯ್ಯಲಾಗಿದೆ ಎಂದು ತಿಳಿಸಿದ್ದಾರೆ.
ಉತ್ತರಪ್ರದೇಶದ ಕೈಲೋರ್ ಗ್ರಾಮದಲ್ಲಿ ಜನಿಸಿದ ಅಂಜು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದಳು. ಅಂಜು ಈ ಹಿಂದೆ ಅರವಿಂದ್ ಎಂಬುವವರನ್ನು ಮದುವೆಯಾಗಿದ್ದು 15 ವರ್ಷದ ಮಗಳು ಹಾಗೂ 6 ವರ್ಷದ ಮಗನಿದ್ದಾನೆ. ಪತಿ ಹಾಗೂ ಮಕ್ಕಳನ್ನು ಬಿಟ್ಟು ಪಾಕ್ ಗೆ ತೆರಳಿದ್ದ ಅಂಜು ಇದೀಗ ಅಲ್ಲಿಯೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾಗಿದ್ದು, ಪಾಕಿಸ್ತಾನಕ್ಕೆ ತೆರಳಿದ ಬಳಿಕ ‘ಇಲ್ಲಿ ಸುರಕ್ಷಿತವಾಗಿದ್ದೇನೆ’ ಎಂದು ಹೇಳುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾಳೆ.
ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್ಗೆ ಕಳುಹಿಸಲಾದ ಆಂತರಿಕ ಸಚಿವಾಲಯದ ಅಧಿಕೃತ ದಾಖಲೆಯ ಪ್ರಕಾರ ಅಪ್ಪರ್ ದಿರ್ಗೆ ಮಾತ್ರ ಮಾನ್ಯವಾಗಿರುವ ಅಂಜುಗೆ 30 ದಿನಗಳ ವೀಸಾವನ್ನು ನೀಡಲು ನಿರ್ಧರಿಸಲಾಗಿದೆ. ಆ ಪ್ರಕಾರ ಆಗಸ್ಟ್ 20ರಂದು ಅಂಜು ಭಾರತಕ್ಕೆ ಮರಳಲಿದ್ದಾಳೆ ಎಂದು ವರದಿಗಳು ತಿಳಿಸಿವೆ.