ಶುಂಠಿ ಹಲವು ಔಷಧೀಯ ಗುಣಗಳನ್ನು ಒಳಗೊಂಡಿದೆ. ಶುಂಠಿಯನ್ನು ಸೇವಿಸುವುದರಿಂದ ಶೀತ, ವಾಕರಿಕೆ, ಸಂಧಿವಾತ, ಮೈಗ್ರೇನ್ ಮತ್ತು ಅಧಿಕ ರಕ್ತದೊತ್ತಡದಂತಹ ಹಲವಾರು ಕಾಯಿಲೆಗಳನ್ನು ಹತೋಟಿಗೆ ತರಬಹುದು. ಆದ್ದರಿಂದಲೇ ಈ ರೀತಿಯ ಕಾಯಿಲೆಗಳ ಚಿಕಿತ್ಸೆಗಳಲ್ಲಿ ಶುಂಠಿಯನ್ನು ಬಳಸಲಾಗುತ್ತದೆ. ಶುಂಠಿ ತುಂಬಾ ಖಾರವನ್ನು ಹೊಂದಿರುವುದರಿಂದ ಅದನ್ನು ಹಾಗೇ ತಿನ್ನುವುದು ಕಷ್ಟ. ಆದ್ದರಿಂದ ಇವತ್ತಿನ ನಮ್ಮ ರೆಸಿಪಿಯಲ್ಲಿ ಸಿಹಿಯಾದ ಶುಂಠಿ ಬರ್ಫಿಯನ್ನು ಯಾವ ರೀತಿ ಮಾಡುವುದು ಎಂಬುದನ್ನು ನೋಡೋಣ!
ಬೇಕಾಗುವ ಸಾಮಗ್ರಿಗಳು:
ಉಪ್ಪು – 1 ಚಮಚ
ಸಕ್ಕರೆ – 2 ಕಪ್
ಹಾಲು – 2 ಕಪ್
ಏಲಕ್ಕಿ ಪೌಡರ್ – 1 ಚಮಚ
ತುಪ್ಪ – 4 ಚಮಚ
ಶುಂಠಿ -200 ಗ್ರಾಂ
ಮಾಡುವ ವಿಧಾನ:
* ಮೊದಲಿಗೆ ಶುಂಠಿಯನ್ನು ಚೆನ್ನಾಗಿ ತೊಳೆದು ಒಂದು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
* ಬಳಿಕ ಒಂದು ಬಾಣಾಲೆಯಲ್ಲಿ ತುಪ್ಪ ಹಾಕಿ ಬಿಸಿಗಿಡಿ. ಬಿಸಿಯಾದ ಬಳಿಕ ಅದಕ್ಕೆ ರುಬ್ಬಿಕೊಂಡ ಶುಂಠಿ ಪೇಸ್ಟ್ ಅನ್ನು ಹಾಕಿಕೊಂಡು ಅದರ ಹಸಿವಾಸನೆ ಹೋಗಿ ಎಣ್ಣೆ ಬಿಟ್ಟುಕೊಳ್ಳುವವರೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
* ಈಗ ಅದಕ್ಕೆ ಸಕ್ಕರೆ ಸೇರಿಸಿ ಶುಂಠಿ ಪೇಸ್ಟ್ನೊಂದಿಗೆ ಹೊಂದಿಕೊಳ್ಳುವಂತೆ 10ರಿಂದ 12 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಿ.
* ಈ ಪಾಕ ಚೆನ್ನಾಗಿ ಹೊಂದಿಕೊಂಡು ದಪ್ಪವಾಗಲು ಪ್ರಾರಂಭವಾದ ಬಳಿಕ ಅದಕ್ಕೆ ಅರ್ಧ ಕಪ್ ಹಾಲನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡುತ್ತಲೇ ಇರಬೇಕು. ಇಲ್ಲವಾದಲ್ಲಿ ತಳ ಹಿಡಿಯುವ ಸಾಧ್ಯತೆಗಳಿವೆ.
* ಬಳಿಕ ಇದಕ್ಕೆ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಮತ್ತು ಏಲಕ್ಕಿ ಪೌಡರ್ ಅನ್ನು ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ.
* ಎಲ್ಲಾ ಪದಾರ್ಥಗಳು ಚೆನ್ನಾಗಿ ಹೊಂದಿಕೊಂಡ ಬಳಿಕ ಅದನ್ನು ಒಂದು ಅಗಲವಾದ ಪ್ಲೇಟ್ಗೆ ವರ್ಗಾಯಿಸಿಕೊಂಡು ಸಮವಾಗಿ ಹರಡಿಕೊಳ್ಳಿ.
* ನಂತರ ಈ ಮಿಶ್ರಣವನ್ನು 20 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ನಿಮಿಗಿಷ್ಟವಾದ ಆಕಾರದಲ್ಲಿ ಕತ್ತರಿಸಿ ಸವಿಯಲು ಕೊಡಿ.
ಇದನ್ನೂ ಓದಿ : ಪಾಕ್ ನ ಪಾಕ್ ಫೇಸ್ಬುಕ್ ಸ್ನೇಹಿತನೊಂದಿಗೆ ಅಂಜು ಮದುವೆ; ನಮ್ಮ ಪಾಲಿಗೆ ಆಕೆ ಸತ್ತಂತೆ ಎಂದ ತಂದೆ