ಬೆಂಗಳೂರು ;– 30 ಶಾಸಕರು ಸಚಿವರ ವಿರುದ್ಧ ಸಹಿ ಸಂಗ್ರಹಿಸಿದ ಬೆಳವಣಿಗೆಯ ಬೆನ್ನಲ್ಲೇ ಗುರುವಾರ (ಇಂದು) ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆಯು ಇಂದು ಸಂಜೆ 6.30 ರ್ಯಾಡಿಸನ್ ಬ್ಲೂ ಹೋಟೆಲ್ನಲ್ಲಿ ನಡೆಯಲಿದ್ದು, ಒಗ್ಗಟ್ಟಾಗಿ ತಮ್ಮ ದುಮ್ಮಾನ ಹೇಳಿಕೊಳ್ಳಲು ಶಾಸಕರೂ ಸಹ ತಯಾರಾಗಿದ್ದಾರೆ.
ಪಕ್ಷವು ಲೋಕಸಭೆ ಚುನಾವಣೆಗೆ ತಯಾರಿಗೆ ಗುರಿಗಳನ್ನು ನೀಡಲು, ಕೇಂದ್ರ ವಿರುದ್ಧ ನಿರಂತರ ಹೋರಾಟ ಸಂಘಟಿಸಲು ಶಾಸಕರಿಗೆ ಸೂಚನೆಗಳನ್ನು ನೀಡಲಿದೆ. ಇದೇ ಕಾರಣಕ್ಕೆ ಖುದ್ದು ಮಲ್ಲಿಕಾರ್ಜುನ ಖರ್ಗೆಯವರೇ ಸಭೆಗೆ ಆಗಮಿಸುತ್ತಿದ್ದಾರೆ.
ಇತ್ತ ಶಾಸಕರು ಕಳೆದ ಎರಡು ತಿಂಗಳಲ್ಲಿ ತಾವು ಅನುಭವಿಸಿದ ಸಂಕಟವನ್ನು ಸರ್ಕಾರ ಹಾಗೂ ಪಕ್ಷದ ಗಮನಕ್ಕೆ ತರಲು ಸಂಘಟಿತರಾಗಿದ್ದಾರೆ.
ಸರ್ಕಾರಿ ನೌಕರರ ವರ್ಗಾವಣೆ ವಿಷಯದಲ್ಲಿ ಹಲವು ಸಚಿವರು ಶಾಸಕರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಅನುದಾನ ವಿಷಯದಲ್ಲಿ ಸಚಿವರು ಶಾಸಕರ ಮನವಿಗಳಿಗೆ ಸ್ಪಂದಿಸುತ್ತಿಲ್ಲ, ಗ್ಯಾರೆಂಟಿ ಸರ್ಕಾರ ಹಾಗೂ ಪಕ್ಷದ ವರ್ಚಸ್ಸು ಹೆಚ್ಚಿಸಬಹುದು. ಆದರೆ, ಜನರ ಬೇಡಿಕೆ ಈಡೇರಿಸಲು ವಿಶೇಷ ಅನುದಾನ ಕೊಡಲೇಬೇಕು , ಪಕ್ಷಕ್ಕಾಗಿ ಹಲವು ವರ್ಷದಿಂದ ದುಡಿದು 3-4 ಬಾರಿ ಗೆದ್ದ ಶಾಸಕರಿಗೆ ಹೊಸ ಸಚಿವರು ಪ್ರಾಮುಖ್ಯತೆ ಕೊಡುತ್ತಿಲ್ಲ ಎಂಬ ಸಾಮಾನ್ಯ ಅಭಿಪ್ರಾಯ ಹೊಂದಿರುವ ಹಿರಿಯ ಶಾಸಕರು ಒಟ್ಟಾಗಿ ಅಭಿಪ್ರಾಯ ತಿಳಿಸಲು ತೀರ್ಮಾನಿಸಿದ್ದಾರೆಂದು ಮೂಲಗಳು ತಿಳಿಸಿವೆ.