ಮಣಿಪುರ: ಮಣಿಪುರದಲ್ಲಿ ಹಿಂಸಾಚಾರ ಮಾತ್ರವಲ್ಲ, ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ ಪ್ರಕರಣವೂ ನಿಲ್ಲೋ ಹಾಗೆ ಕಾಣ್ತಿಲ್ಲ. ಇತ್ತೀಚೆಗಷ್ಟೇ, ಇಬ್ಬರು ಮಹಿಳೆಯರನ್ನು ಬೆತ್ತಲೆ ಪರೇಡ್ ಆಡಿಸಿರೋ ವೈರಲ್ ಹೊರಬಂದಿತ್ತು. ಈ ಬಳಿಕ ಅನೇಕ ಲೈಂಗಿಕ ಕಿರುಕುಳ, ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ ಎಂದು ಹೇಳಲಾಗ್ತಿದೆ. ಈ ಬೆನ್ನಲ್ಲೇ, ಬಿಎಸ್ಎಫ್ ಯೋಧರೊಬ್ಬರು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಬಹಿರಂಗವಾಗಿದ್ದು, ಸಿಸಿ ಕ್ಯಾಮೆರಾದಲ್ಲೂ ಸೆರೆಯಾಗಿದೆ.
ಕಳೆದ ವಾರ ಜನಾಂಗೀಯ ಕಲಹ ಪೀಡಿತ ಮಣಿಪುರದ ದಿನಸಿ ಅಂಗಡಿಯೊಂದರಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ದೃಶ್ಯ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕಿದೆ. ಈ ಸಂಬಂಧ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಹೆಡ್ ಕಾನ್ಸ್ಟೆಬಲ್ನನ್ನು ಗಡಿ ಕಾವಲು ಪಡೆ ಅಮಾನತುಗೊಳಿಸಿದೆ. ಹಾಗೂ, ಆರೋಪಿ ಯೋಧನ ವಿರುದ್ಧ ಪ್ರಕರಣ ದಾಖಲಾಗಿದೆ.
ಅಂಗಡಿಯೊಳಗಿನ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಸಮವಸ್ತ್ರದಲ್ಲಿರುವ ಮತ್ತು INSAS ರೈಫಲ್ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ತೋರಿಸಿದೆ. ನಂತರ ಇವರನ್ನು ಹೆಡ್ ಕಾನ್ಸ್ಟೆಬಲ್ ಸತೀಶ್ ಪ್ರಸಾದ್ ಎಂದು ಗುರುತಿಸಲಾಗಿದೆ. ಇವರು ಮಹಿಳೆಯನ್ನು ಅಸಹ್ಯವಾಗಿ ಮುಟ್ಟಿದ್ದು, ಲೈಂಗಿಕ ದೌರ್ಜನ್ಯ ನೀಡಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿದ ಹಿರಿಯ ಅಧಿಕಾರಿಯೊಬ್ಬರು “ಇಂಫಾಲ್ನಲ್ಲಿ ಜುಲೈ 20 ರಂದು ಪೆಟ್ರೋಲ್ ಪಂಪ್ ಬಳಿಯ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಹೆಡ್ ಕಾನ್ಸ್ಟೆಬಲ್ ಸತೀಶ್ ಪ್ರಸಾದ್ ಎಂದು ಗುರುತಿಸಲಾಗಿದೆ. ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಇಂದು ರಾಜಸ್ಥಾನ, ಗುಜರಾತ್ ಪ್ರವಾಸ ಕೈಗೊಂಡ PM ಮೋದಿ