ಬೆಂಗಳೂರು ;- ಗರಿಷ್ಠ ಒಂದು ವರ್ಷದ ಮಿತಿಯಲ್ಲಿ ವಿಚ್ಚೇದನ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಹೈಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಮನುಷ್ಯ ಜೀವನದ ಅಲ್ಪಾವಧಿ ಗಮನದಲ್ಲಿಟ್ಟುಕೊಂಡು ವೈವಾಹಿಕ ಪ್ರಕರಣಗಳ ವಿಲೇವಾರಿಯನ್ನು ಯುದ್ದೋಪಾದಿಯಲ್ಲಿ ಕೈಗೊಳ್ಳಬೇಕಿದೆ. ಈ ರೀತಿ ಕೌಟುಂಬಿಕ ಪ್ರಕರಣಗಳು ವಿಲೇವಾರಿಯಲ್ಲಿ ವಿಳಂಬವಾದಲ್ಲಿ ಎರಡೂ ಕುಟುಂಬಗಳ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪೀಠ ತಿಳಿಸಿದೆ.
ಲೈಫ್ ಈಸ್ ಟೂ ಶಾರ್ಟ್ ಟು ಬಿ ಲಿಟ್ಲ್ (ಬದುಕು ತೀರಾ ಚಿಕ್ಕದು) ಎಂಬ ಆಂಗ್ಲ ಇತಿಹಾಸಕಾರರೊಬ್ಬರ ಹೇಳಿಕೆಯನ್ನು ಆದೇಶದಲ್ಲಿ ಉಲ್ಲೇಖಿಸಿರುವ ನ್ಯಾಯಮೂರ್ತಿಗಳು, ಮದುವೆಯ ವಿಸರ್ಜನೆ ಅಥವಾ ಅನೂರ್ಜಿತತೆ ಬಯಸುವ ವೈವಾಹಿಕ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಗರಿಷ್ಠ ಒಂದು ವರ್ಷದ ಮಿತಿಯೊಳಗೆ ವಿಲೇವಾರಿಗೊಳಿಸುವ ಎಲ್ಲ ಪ್ರಯತ್ನಗಳನ್ನು ಕೌಟುಂಬಿಕ ಅಥವಾ ವಿಚಾರಣಾ ನ್ಯಾಯಾಲಯಗಳು ಮಾಡಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ.