ಶಿವಮೊಗ್ಗ: ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ, ಶಿವಮೊಗ್ಗ, ಹುಬ್ಬಳಿ ಗಲಾಟೆ ಪ್ರಕರಣ ಆರೋಪಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನ ವಾಪಸ್ ಪಡೆಯಲು ಪರಿಶೀಲಿಸುವಂತೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿಜೆ ಹಳ್ಳಿ, ಕೆಜಿ ಹಳ್ಳಿ ಗಂಟೆಗಟ್ಟಲೆ ಹೊತ್ತಿ ಉರಿದಿತ್ತು. ಪೊಲೀಸ್ ಸ್ಟೇಷನ್, ಶಾಸಕರ ಮನೆಗಳು ಹೊತ್ತಿ ಉರಿದವು. ಘಟನೆಗೆ ಕಾರಣರಾದವರನ್ನ ಅಮಾಯಕರು ಎನ್ನುತ್ತಿದ್ದಾರೆ. ಇವರನ್ನು ಅಮಾಯಕರು ಎನ್ನುವುದಾದರೆ ನಿಜವಾದ ಅಮಾಯಕರನ್ನು ಏನೆನ್ನಬೇಕು ಎಂದು ಪ್ರಶ್ನಿಸಿದರು.
ಒಂದು ಸಮುದಾಯವನ್ನು ಓಲೈಕೆ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಬಂದು ಇಂಥವರಿಗೆ ಪ್ರೇರಣೆ ನೀಡುವ ಕೆಲಸ ಮಾಡುತ್ತಿದೆ. ಮೊನ್ನೆ ಐದು ಜನರನ್ನು ಬಂಧಿಸುವಾಗ ಓರ್ವ ಆರೋಪಿ ಕಾಂಗ್ರೆಸ್ ಸರ್ಕಾರ ಬಂದಿದೆ ಹುಷಾರ್ ಎಂದು ಪೊಲೀಸರಿಗೆ ಧಮಕಿ ಹಾಕಿದ್ದಾನೆ. ಈ ಬಗ್ಗೆ ನನಗೆ ಮಾಹಿತಿ ಬಂದಿದೆ. ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಹಿಂದೆ ಶಾರಿಕ್ ಗೂ ಭಯೋತ್ಪಾದಕನಲ್ಲ ಎಂದಿದ್ದರು ಡಿ.ಕೆ.ಶಿವಕುಮಾರ್ ಈಗ ಬಂಧಿತರಾಗಿರುವವರನ್ನು ಭಯೋತ್ಪಾದಕರು ಎಂದು ಈಗಲೇ ಹೇಳಲು ಆಗುವುದಿಲ್ಲ ಎನ್ನುತ್ತಾರೆ. ಗ್ರನೇಡ್, ವಾಕಿಟಾಕಿ ಇಟ್ಟುಕೊಂಡವರು ಇವರ ಅಣ್ಣತಮ್ಮಂದಿರಾ? ಪೊಲೀಸರು ಸರ್ಕಾರದ ಒತ್ತಡಕ್ಕೆ ಮಣಿದು ಇಂಥವರಿಗೆ ಸಹಕಾರ ನೀಡಿ ತಲೆತಗ್ಗಿಸಬೇಕಾಗುತ್ತದೆ ಎಂದರು.