ಸಿಕರ್: 2024ರ ಲೋಕಸಭೆ ಚುನಾವಣೆಯನ್ನು ಒಗ್ಗೂಡಿ ಎದುರಿಸಲು ಪ್ರತಿಪಕ್ಷಗಳು ಬೆಂಗಳೂರಿನಲ್ಲಿ ಇತ್ತೀಚೆಗೆ ರಚನೆ ಮಾಡಿಕೊಂಡಿರುವ ‘ಇಂಡಿಯಾ’ ಮೈತ್ರಿಕೂಟದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ದೇಶಭಕ್ತಿಯನ್ನು ತೋರಿಸುವ ಉದ್ದೇಶದಿಂದ ‘ಇಂಡಿಯಾ’ ಹೆಸರು ಇಟ್ಟಿಲ್ಲ. ದೇಶವನ್ನು ದೋಚುವ ದುರುದ್ದೇಶದಿಂದ ಆ ಹೆಸರು ಬಳಸಿಕೊಳ್ಳಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ (Assembly Election) ನಡೆಯಲಿರುವ ರಾಜಸ್ಥಾನದ (Rajasthan) ಸಿಕರ್ನಲ್ಲಿ ರಾರಯಲಿ ಉದ್ದೇಶಿಸಿ ಮಾತನಾಡಿದ ಅವರು, ವಂಚಕ ಕಂಪನಿಗಳು ಈ ಹಿಂದೆ ಹೆಸರು ಬದಲಾವಣೆ ಮಾಡಿಕೊಳ್ಳುತ್ತಿದ್ದವು. ಅದೇ ರೀತಿ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಹೆಸರನ್ನು ಬದಲಿಸಿಕೊಂಡಿವೆ. ಕಾಂಗ್ರೆಸ್ ಎಂಬುದು ದಿಕ್ಕು ದಿಸೆ ಇಲ್ಲದ ಪಕ್ಷವಾಗಿದೆ ಎಂದು ಹರಿಹಾಯ್ದರು. ಇಂದಿರಾ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಇಂದಿರಾ ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಘೋಷಣೆ ಹಾಕಲಾಗಿತ್ತು. ಆಗ ಜನರು ಕಾಂಗ್ರೆಸ್ ಪಕ್ಷವನ್ನು ಬುಡಮೇಲು ಮಾಡಿದ್ದರು ಎಂದರು.