ಬೆಂಗಳೂರು: ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ನಡುವಣ 2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯ ಅಕ್ಟೋಬರ್ 15ರಂದು ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜನೆ ಆಗಬೇಕಿದೆ. ಈ ಪಂದ್ಯದ ತಯಾರಿಯಲ್ಲಿರುವ ಕ್ರಿಕೆಟ್ ಪ್ರಿಯರು, ಇದೀಗ ತಮ್ಮ ವೇಳಾಪಟ್ಟಿ ಬದಲಾಯಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಏಕೆಂದರೆ, ಇತ್ತೀಚಿನ ಮಾಹಿತಿ ಪ್ರಕಾರ ನವರಾತ್ರಿ ಹಬ್ಬ ಮತ್ತು ಭದ್ರತೆ ದೃಷ್ಟಿಯಲ್ಲಿ ಇಂಡಿಯಾ-ಪಾಕಿಸ್ತಾನ ಪಂದ್ಯದ ದಿನಾಂಕವನ್ನು ಬದಲಾಯಿಸಲು ಬಿಸಿಸಿಐ ಮುಂದಾಗಿದೆ ಎಂಬುದು ತಿಳಿದುಬಂದಿದೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈ-ವೋಲ್ಟೇಜ್ ಪಂದ್ಯ ವೀಕ್ಷಿಸಲು ಈ ಬಾರಿ ವಿಶ್ವ ದಾಖಲೆಯ 1.3 ಲಕ್ಷ ಮಂದಿ ಕ್ರೀಡಾಂಗಣದಲ್ಲಿ ಹಾಜರಿರಲಿದ್ದಾರೆ ಎಂದೇ ಅಂದಾಜಿಸಲಾಗಿದೆ. ಇನ್ನು ಅಕ್ಟೋಬರ್ 15ರ ಹಿಂದು ಮುಂದಿನ ದಿನಗಳಲ್ಲಿ ಅಹ್ಮದಾಬಾದ್ನ ಎಲ್ಲ ಹೋಟೆಲ್ಗಳು ಈಗಾಗಗಲೇ ಬುಕ್ ಆಗಿವೆ. ಹೋಟೆಲ್ ರೂಮ್ ಸಿಗದೇ ಇರುವ ಕಾರಣಕ್ಕೆ ಕ್ರಿಕೆಟ್ ಪ್ರಿಯರು ಆಸ್ಪತ್ರೆ ಬೆಡ್ಗಳನ್ನೇ ಬುಕ್ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಗಳ ಮೂಲಕ ಬೆಳಕಿಗೆ ಬಂದಿತ್ತು.
ಭದ್ರತೆ ದೃಷ್ಟಿಯಲ್ಲಿ ಭಾರತ-ಪಾಕಿಸ್ತಾನ ತಂಡಗಳ ನಡುವಣ ವಿಶ್ವಕಪ್ ಪಂದ್ಯದಲ್ಲಿ ಬದಲಾವಣೆ ಆಗಲಿದೆ. ಭದ್ರತಾ ತಂಡವು ದಿನಾಂಕ ಬದಲಾಯಿಸುವಂತೆ ಬಿಸಿಸಿಐಗೆ ಮನವಿ ಮಾಡಿವೆ. ಈ ಬೆಳವಣಿಗೆ ಹತ್ತಿರದ ಮೂಲಗಳ ಪ್ರಕಾರ ಶೀಘ್ರವೇ ಅಧಿಕೃತ ಮಾಹಿತಿ ಹೊರಬರಲಿದೆ. ಆದರೆ, ಇದು ಸುಲಭದ ಮಾತಲ್ಲ. ಏಕೆಂದರೆ ಪಂದ್ಯ ಆಯೋಜನೆಯ ಹಿಂದೆ ಹಲವು ತಿಂಗಳ ಶ್ರಮವಿರುತ್ತದೆ. ಕ್ರಿಕೆಟ್ ಪ್ರಿಯರು ಕೂಡ ಈ ಸಲುವಾಗಿ ಸಾಕಷ್ಟು ತಯಾರಿ ನಡೆಸಿರುತ್ತಾರೆ,” ಎಂದು ಇಂಡಿಯಾ ಟುಡೇ ತನ್ನ ವರದಿಯಲ್ಲಿ ವಿವರಿಸಿದೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದ್ದು, ಬರೋಬ್ಬರಿ 1 ಕೋಟಿ, 10 ಲಕ್ಷ ಮಂದಿಗೆ ಆಸನ ಒದಗಿಸುವ ಸಾಮರ್ಥ್ಯ ಹೊಂದಿದೆ. ಇದನ್ನು 1 ಕೋಟಿ, 30 ಲಕ್ಷಕ್ಕೆ ವಿಸ್ತರಿಸುವ ಸಾಧ್ಯತೆ ಇದೆ. ಅಷ್ಟು ಮಂದಿ ಕ್ರೀಡಾಂಗಣಕ್ಕೆ ಆಗಮಿಸಿದ್ದೇ ಆದರೆ, ಇದು ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಪ್ರೇಕ್ಷಕರನ್ನು ಹೊಂದಿದ ಪಂದ್ಯ ಎನಿಸಲಿದೆ. 2022ರಲ್ಲಿ ಆಸ್ಟ್ರೆಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಣ ಟಿ20 ವಿಶ್ವಕಪ್ ಪಂದ್ಯವನ್ನು ಸರಿಸುಮಾರು 90 ಸಾವಿರ ಮಂದಿ ಕ್ರೀಡಾಂಗಣದಲ್ಲಿ ವೀಕ್ಷಿಸಿ ದಾಖಲೆ ಬರೆದಿದ್ದರು.
ದೇಶದ 10 ಪ್ರಮುಖ ಕ್ರೀಡಾಂಗಣಗಳಲ್ಲಿ ವಿಶ್ವಕಪ್ ಪಂದ್ಯಗಳ ಆಯೋಜನೆ ಆಗಲಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಅಕ್ಟೋಬರ್ 5ರಂದು ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಸೆಮಿಫೈನಲ್ ಪಂದ್ಯಗಳಿಕೆ ಮುಂಬೈ ಮತ್ತು ಕೋಲ್ಕತಾದ ಕ್ರೀಡಾಂಗಣಗಳು ಆತಿಥ್ಯ ವಹಿಸಿವೆ.