ಕಾಬೂಲ್: ಭಾರತದ ಐಪಿಎಲ್ (IPL) ಬಳಿಕ ವಿಶ್ವದೆಲ್ಲೆಡೆ ಟಿ20 ಕ್ರಿಕೆಟ್ ಟೂರ್ನಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇಂತಹ ಟಿ20 ಲೀಗ್ಗಳಲ್ಲಿ (T20 Cricket League) ಹಲವು ದಾಖಲೆ ಸಿಡಿಸಿರುವುದನ್ನೂ ನಾವು ನೋಡಿದ್ದೇವೆ. ಅದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಕಾಬೂಲ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ನಲ್ಲಿ ಅಫ್ಘಾನಿಸ್ತಾನದ (Afghanistan) ಬ್ಯಾಟರ್ ಒಬ್ಬರು ಒಂದೇ ಓವರ್ನಲ್ಲಿ 7 ಸಿಕ್ಸ್ಗಳೊಂದಿಗೆ 48 ರನ್ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ. 48 ರನ್ ಚಚ್ಚಿಸಿಕೊಂಡ ಬೌಲರ್ ಮೈದಾನದಲ್ಲಿ ಕಣ್ಣೀರಿಟ್ಟಿರುವ ಪ್ರಸಂಗ ಗಮನ ಸೆಳೆದಿದೆ.
ಕಾಬೂಲ್ ಪ್ರೀಮಿಯರ್ ಲೀಗ್ನಲ್ಲಿ ಶಾಹೀನ್ ಹಂಟರ್ಸ್ ಹಾಗೂ ಅಬಾಸಿನ್ ಡಿಫೆಂಡರ್ಸ್ ನಡುವಿನ ಪಂದ್ಯದಲ್ಲಿ ಎದುರಾಳಿ ತಂಡದ ಅಮೀರ್ ಝಜೈ (Amir Zazai) ಬೌಲಿಂಗ್ಗೆ ಅಫ್ಘಾನಿಸ್ತಾನದ ಸ್ಟಾರ್ ಆಟಗಾರ ಸೆಡಿಕುಲ್ಲಾ ಅಟಲ್ (Sediqullah Atal) ಒಂದೇ ಓವರ್ನಲ್ಲಿ 7 ಸಿಕ್ಸ್ಗಳೊಂದಿಗೆ 48 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಎಸೆತದಲ್ಲಿ ನೋಬಾಲ್ ನೊಂದಿಗೆ ಅಟಲ್ ಸಿಕ್ಸ್ ಬಾರಿಸಿದರು, 2ನೇ ಎಸೆತ ವೈಡ್ನೊಂದಿಗೆ ಫೋರ್ಗೆ ತಲುಪಿತು. ಮುಂದಿನ ಆರು ಎಸೆತಗಳನ್ನೂ 6,6,6,6,6,6 ಬಾರಿಸಿ ಭರ್ಜರಿ ಶತಕದೊಂದಿಗೆ ಮಿಂಚಿದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಶಾಹಿನ್ ಹಂಟರ್ಸ್ 20 ಓವರ್ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 213 ರನ್ ಬಾರಿಸಿತ್ತು. ಅಟಲ್ ಟೀಂ ಪರವಾಗಿ 56 ಎಸೆತಗಳಲ್ಲಿ 7 ಬೌಂಡರಿ, 10 ಸಿಕ್ಸರ್ಗಳೊಂದಿಗೆ 118 ರನ್ ಚಚ್ಚಿ ಅಜೇಯರಾಗುಳಿದರು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಡಿಫೆಂಡರ್ಸ್ 18.3 ಓವರ್ಗಳಲ್ಲಿ 121 ರನ್ ಗಳಿಗೆ ಸರ್ವಪತನ ಕಂಡಿತು.
ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಭ್ರಷ್ಟವಾಗಿದೆ.
ಈ ಮಧ್ಯೆ ಅಫ್ಘಾನಿಸ್ತಾನದ ಕ್ರಿಕೆಟಿಗ ಉಸ್ಮಾನ್ ಘನಿ, ಅಫ್ಘಾನಿಸ್ತಾನದ ಅಂತರರಾಷ್ಟ್ರೀಯ ತಂಡದಿಂದ ಹೊರಗುಳಿದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಗುಡ್ಬೈ ಹೇಳುವುದಾಗಿ ತಿಳಿಸಿದ್ದಾರೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಅತ್ಯಂತ ಭ್ರಷ್ಟವಾಗಿದೆ. ಆದ್ದರಿಂದ ನಾನು ಕ್ರಿಕೆಟ್ನಿಂದಲೇ ವಿರಾಮ ತೆಗೆದುಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.